40% ಕಮಿಷನ್ ಆರೋಪ: ನ್ಯಾ.ನಾಗಮೋಹನದಾಸ್ ಸಮಿತಿ ವರದಿ ಆಧರಿಸಿ ಮಾಜಿ ಶಾಸಕರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ
40% ಕಮಿಷನ್ ಆರೋಪ: ನ್ಯಾ.ನಾಗಮೋಹನದಾಸ್ ಸಮಿತಿ ವರದಿ ಆಧರಿಸಿ ಮಾಜಿ ಶಾಸಕರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

ಕಾರವಾರ: ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ನೇಮಕ ಮಾಡಿದ್ದ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿ ಸಲ್ಲಿಕೆ ಮಾಡಿದ್ದು, ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಬಿಜೆಪಿಯ ಇನ್ನೋರ್ವ ಶಾಸಕರು ಹಾಗೂ ಓರ್ವ ಅಧಿಕಾರಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಶಂಭು ಶೆಟ್ಟಿ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನ್ಯಾ. ನಾಗಮೋಹನ್ ದಾಸ್ ಅವರ ಸಮಿತಿ ರಚಿಸಿತ್ತು. ಅದರಂತೆ ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರ ವಿರುದ್ಧ ಗುತ್ತಿಗೆದಾರ ಮಾಧವ ನಾಯಕ ದೂರು ನೀಡಿದ್ದರು.
ಚಿತ್ರದುರ್ಗದ ಮಾಜಿ ಶಾಸಕ ತಿಪ್ಪರೆಡ್ಡಿ ವಿರುದ್ಧವೂ ಆರ್ ಮಂಜುನಾಥ ಮೂರು ಹಂತದಲ್ಲಿ ಪರ್ಸೆಂಟೇಜ್ ಪಡೆಯುತ್ತಿರುವ ಬಗ್ಗೆ ಹಾಗೂ ತಮ್ಮಿಂದ 90 ಲಕ್ಷ ಹಣ ಪಡೆದಿರುವ ಬಗ್ಗೆ ದೂರಿದ್ದರು. ಇದಲ್ಲದೆ ಚೀಪ್ ಎಂಜಿನೀಯರ್ ಎಸ್ ಎಫ್ ಪಾಟೀಲ್ ವಿರುದ್ಧ ಗುತ್ತಿಗೆದಾರ ಮಲ್ಲನಗೌಡ ಶಂಕರಗೌಡ ಬಿಲ್ ಪಾಸ್ ಮಾಡುವುದಕ್ಕೆ ಲಂಚ ಕೇಳುತ್ತಿದ್ದ ಬಗ್ಗೆ ಉಲ್ಲೇಖಿಸಿ ದೂರಿದ್ದರು. ಇದೀಗ ವರದಿಯಲ್ಲಿ ಮೂವರ ವಿರುದ್ಧದ ದಾಖಲೆಗಳನ್ನು ಸಂಗ್ರಹಿಸಿದ ಸಮಿತಿಯು ಭಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಖಚಿತವಾಗಿದ್ದು ಸರ್ಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎಂದರು.
ಈ ವೇಳೆ ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ರಾಜೇಂದ್ರ ರಾಣೆ, ಬಾಬು ಶೇಖ್, ಸಲೀಂ ಶೇಖ್, ಮಚ್ಚೇಂದ್ರ ಮಹಾಲೆ, ಗಣಪತಿ ಕುಡ್ತಲ್ಕರ್, ಪ್ರದೀಪ ಬಾನಾವಳಿ, ಚಂದ್ರಕಾಂತ ನಾಯ್ಕ ಇದ್ದರು.