ಕೇಣಿ ವಾಣಿಜ್ಯ ಬಂದರು ಯೋಜನೆಗೆ ಕಾರವಾರದಲ್ಲೂ ತೀವ್ರ ವಿರೋಧ: ಮೀನು ಮಾರಾಟ ಬಂದ್
ಕೇಣಿ ವಾಣಿಜ್ಯ ಬಂದರು ಯೋಜನೆಗೆ ಕಾರವಾರದಲ್ಲೂ ತೀವ್ರ ವಿರೋಧ: ಮೀನು ಮಾರಾಟ ಬಂದ್

ಕಾರವಾರ: ಅಂಕೋಲಾ ತಾಲೂಕಿನ ಕೇಣಿಯಲ್ಲಿ ನಿರ್ಮಾಣವಾಗಲಿರುವ ನೂತನ ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಿ ಮಂಗಳವಾರ ಜಿಲ್ಲಾ ಮಹಿಳಾ ಮೀನು ಮಾರಾಟಗಾರರ ಅಭಿವೃದ್ಧಿ ಸಂಘದಿಂದ ಕಾರವಾರದ ಮೀನು ಮಾರುಕಟ್ಟೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ಬೆಳಗ್ಗೆಯಿಂದಲೇ ಮೀನು ಮಾರುಕಟ್ಟೆಯನ್ನು ಸುಚಿ ಗೊಳಿಸಿದ ಮೀನುಗಾರ ಮಹಿಳೆಯರು ಪ್ರತಿಭಟನೆಗೆ ಸಿದ್ದವಾಗಿದ್ದರು. ಮಾರುಕಟ್ಟೆ ಬಂದ್ ಹಿನ್ನಲೆ ಬಂದ ಗ್ರಾಹಕರನ್ನು ಕೂಡ ಬಂದ್ ಇರುವ ಮಾಹಿತಿ ನೀಡಿ ವಾಪಸ್ ಕಳಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ವಾಣಿಜ್ಯ ಬಂದರಿನ ಹೆಸರಿನಲ್ಲಿ ಮೀನುಗಾರಿಕೆಯ ಭವಿಷ್ಯ ನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಅಂತಹ ಯೋಜನೆ ಬೇಡ ಎಂದು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು.
ಮೀನುಗಾರಿಕೆಗೆ ಇರುವ ಕಡಲತೀರಗಳನ್ನು ಯಾವುದೇ ವಾಣಿಜ್ಯ ಬಳಕೆಗಾಗಿ ಹಂಚಿಸಬಾರದು. ವಾಣಿಜ್ಯ ಬಂದರುಗಳ ಹೆಸರಿನಲ್ಲಿ ತಟವಾಸಿ ಸಮುದಾಯದ ಜೀವನಾಧಾರವಾದ ಮೀನುಗಾರಿಕೆಗೆ ಯೋಜನೆಗಳು ಅಡ್ಡಿಯಾಗಬಾರದು. ಸರಕಾರ ಸಾವಿರಾರು ಮೀನುಗಾರ ಕುಟುಂಬಗಳ ಬದುಕಿನ ಬಗ್ಗೆ ಯೋಚಿಸಬೇಕು. ನಮ್ಮ ಬದುಕು ಸಮುದ್ರದ ಮೇಲೆ ಆಧಾರಿತವಾಗಿದ್ದು ಬಂದರು ಯೋಜನೆಗಳು ಸಮುದ್ರವನ್ನು ನಮ್ಮಿಂದ ಕಸಿದುಕೊಳ್ಳುತ್ತಿವೆ. ಇದನ್ನು ನಾವು ಸಹಿಸುವುದಿಲ್ಲ. ಹೀಗಾಗಿ ಕೇಣಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಒಂದು ದಿನ ಮೀನು ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಿ ಬೆಂಬಲ ನೀಡುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷೆ ಸುಶೀಲ ಹರಿಕಂತ್ರ ಅಭಿಪ್ರಾಯ ವ್ಯಕ್ತಪಡಿಸಿದರು.