ಸ್ನೇಹಿತರೊಂದಿಗೆ ಪಾರ್ಟಿ ವೇಳೆ ನೀರಿನಲ್ಲಿ ಮುಳುಗಿದ್ದ ಯುವಕ ಶವವಾಗಿ ಪತ್ತೆ
ಸ್ನೇಹಿತರೊಂದಿಗೆ ಪಾರ್ಟಿ ವೇಳೆ ನೀರಿನಲ್ಲಿ ಮುಳುಗಿದ್ದ ಯುವಕ ಶವವಾಗಿ ಪತ್ತೆ

ಕಾರವಾರ: ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ ಸಂದರ್ಭದಲ್ಲಿ ತಾಲ್ಲೂಕಿನ ಕಾಳಿ ನದಿಯ ಹಿನ್ನೀರಿನಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಕಾರವಾರ ತಾಲೂಕಿನ ಕಡವಾಡದ ಮಾಡಿಭಾಗ ನಿವಾಸಿ ಪ್ರಸಾದ ಪಾಂಡುರಂಗ ಆಂಬ್ರೇಕರ್(34) ಮೃತ ದುರ್ದೈವಿಯಾಗಿದ್ದಾನೆ.
ಪ್ರಸಾದ ಆಂಬ್ರೇಕರ್ ಅವರು ಜು.20 ರಂದು ತಾಲ್ಲೂಕಿನ ಖಾರ್ಗೆಜೂಗ್ ಬ್ರಿಜ್ ಹತ್ತಿರ ಸ್ನೇಹಿತರಾದ ಅಖೀಲ ರೇವಣಕರ, ಸ್ವಪ್ನಾ, ಮನಾಲಿ, ಸಂಜೀವಿನಿ, ಪ್ರಸಾದ್ ಮಾಂಜೇಕರ ಹಾಗೂ ಮಹೇಶ ಮಹಾಲೆ ಇವರೊಂದಿಗೆ ಕಾರಿನಲ್ಲಿ ಪಾರ್ಟಿಗೆ ಹೋಗಿದ್ದರು. ಪಾರ್ಟಿ ಬಳಿಕ ಸಂಜೆ ಸುಮಾರು 6.30ರ ಸಮಯಕ್ಕೆ ಬ್ರಿಜ್ ಹತ್ತಿರದ ಕಾಳಿ ನದಿಯ ಹಿನ್ನೀರಿನಲ್ಲಿ ಈಜಲು ಮುಂದಾಗಿದ್ದರು. ಈ ವೇಳೆ ನೀರಿನ ರಭಸ ಜೋರಾಗಿದ್ದರಿಂದ ಪ್ರಸಾದ ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ಘಟನೆ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರದಿಂದ ನಡೆಸಿದ ಶೋಧ ಕಾರ್ಯಾಚರಣೆಯ ಬಳಿಕ, ಮಂಗಳವಾರ ಸಂಜೆ ಪ್ರಸಾದನ ಮೃತದೇಹವು ಕಿನ್ನರ ಗ್ರಾಮದ ಬೋರಿಬಂದರ ಹತ್ತಿರದ ಕಾಳಿ ನದಿಯ ಹಿನ್ನೀರಿನಲ್ಲಿ ಪತ್ತೆಯಾಗಿದೆ. ಮೃತದೇಹವು ಹಿನ್ನೀರಿನಲ್ಲಿ ತೇಲುತ್ತಾ ಬಂದಿದ್ದು, ಸ್ಥಳೀಯ ಗ್ರಾಮಸ್ಥರು ದೋಣಿಯ ಸಹಾಯದಿಂದ ದಡಕ್ಕೆ ತಂದು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.