ರೆಡ್ ಅಲರ್ಟ್ ಹಿನ್ನೆಲೆ: ಉತ್ತರ ಕನ್ನಡದ ಐದು ತಾಲ್ಲೂಕುಗಳ ಶಾಲೆ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ
ರೆಡ್ ಅಲರ್ಟ್ ಹಿನ್ನೆಲೆ: ಉತ್ತರ ಕನ್ನಡದ ಐದು ತಾಲ್ಲೂಕುಗಳ ಶಾಲೆ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ತೀವ್ರಗೊಂಡ ಹಿನ್ನೆಲೆ ಮತ್ತು ಭಾರತೀಯ ಹವಾಮಾನ ಇಲಾಖೆ ನೀಡಿರುವ ‘ರೆಡ್ ಅಲರ್ಟ್’ನಂತೆ, ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲ್ಲೂಕುಗಳ ಎಲ್ಲಾ ಶಾಲೆ ಹಾಗೂ ಕಾಲೇಜುಗಳಿಗೆ ನಾಳೆ ಜುಲೈ 26, 2025 ರಂದು ರಜೆ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನೀಡಿದ ಮಾಹಿತಿ ಪ್ರಕಾರ, ಈ ಜಿಲ್ಲೆಯಲ್ಲಿ 25 ರಿಂದ 26 ರ ವರೆಗೆ ಭಾರಿ ಮಳೆಯ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಹಾಗೂ ಜನಸಾಮಾನ್ಯರ ಹಿತದೃಷ್ಟಿಯಿಂದ ತುರ್ತು ಕ್ರಮವಾಗಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ರಜೆ ಘೋಷಣೆ ಮಾಡಿದ್ದಾರೆ.
ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 34 (ಎಮ್) ಪ್ರಕಾರ ನೀಡಲಾದ ಅಧಿಕಾರದಡಿ ಜಿಲ್ಲಾಡಳಿತ ಈ ಆದೇಶ ಹೊರಡಿಸಿದ್ದು, ಪರೀಕ್ಷೆಗಳನ್ನು ಮಾತ್ರ ಹೊರತುಪಡಿಸಲಾಗಿದೆ. ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಾರವಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಸಾರ್ವಜನಿಕ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಎಲ್ಲಾ ಕಾಲೇಜುಗಳ ಮುಖ್ಯಸ್ಥರು ಈ ಆದೇಶವನ್ನು ಖಚಿತಪಡಿಸಿ, ಅನುಸರಿಸಬೇಕೆಂದು ತಿಳಿಸಲಾಗಿದೆ. ಈ ರಜಾ ದಿನಾಂಕವನ್ನು ಮುಂದಿನ ವೇಳಾಪಟ್ಟಿಗೆ ಹೊಂದಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚಿಸಿದ್ದಾರೆ.