ಎರಡು ತಿಂಗಳ ಬಳಿಕ ಕಡಲಿಗಿಳಿದ ಮೀನುಗಾರರು: ಬಂದರಿನಲ್ಲಿ ಸಂಭ್ರಮ
ಎರಡು ತಿಂಗಳ ಬಳಿಕ ಕಡಲಿಗಿಳಿದ ಮೀನುಗಾರರು: ಬಂದರಿನಲ್ಲಿ ಸಂಭ್ರಮ

ಕಾರವಾರ: ಎರಡು ತಿಂಗಳ ಮೀನುಗಾರಿಕೆ ರಜೆ ಮುಕ್ತಾಯಗೊಂಡಿದ್ದು, ಇಂದಿನಿಂದ ಮತ್ತೆ ಕಡಲಿನಲ್ಲಿ ಮೀನುಗಾರಿಕಾ ಚಟುವಟಿಕೆಗಳು ಗರಿಗೆದರಿವೆ. ಎರಡು ತಿಂಗಳ ಆಳ ಸಮುದ್ರ ಮೀನುಗಾರಿಕೆಗೆ ಹೇರಿದ್ದ ನಿರ್ಬಂಧ ತೆರವಾದ ಹಿನ್ನೆಲೆಯಲ್ಲಿ ಮೀನುಗಾರರು ಬೋಟುಗಳನ್ನು ಸಿದ್ಧಪಡಿಸಿ, ಪೂಜೆ ಸಲ್ಲಿಸಿ ಉತ್ಸಾಹದಿಂದ ಮತ್ಸ್ಯ ಬೇಟೆಗೆ ತೆರಳಿದ್ದಾರೆ.
ಮುಂಗಾರು ಮಳೆಯಿಂದಾಗಿ ಪ್ರತಿಕೂಲ ಹವಾಮಾನ ಹಾಗೂ ಮೀನು ಸಂತಾನೋತ್ಪತ್ತಿಯ ಕಾರಣದಿಂದ ಜೂ.1 ರಿಂದ ಜು.31ರ ವರೆಗೆ ನಿರ್ಭಂಧ ಹೇರಲಾಗಿತ್ತು. ಈ ಅವಧಿಯಲ್ಲಿ ತಮ್ಮ ಬೋಟುಗಳ ದುರಸ್ತಿ, ಬಲೆಗಳ ಸರಿಪಡಿಸುವಿಕೆ, ಬೋಟ್‌ಗೆ ಬಣ್ಣ ಬಳಿಯುವುದು ಸೇರಿದಂತೆ ವಿವಿಧ ನಿರ್ವಹಣಾ ಕಾರ್ಯಗಳಲ್ಲಿ ಮೀನುಗಾರರು ತೊಡಗಿಸಿಕೊಂಡಿದ್ದರು.
ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿನಲ್ಲಿಯೂ ಇಂದಿನಿಂದಲೇ ಮೀನುಗಾರಿಕೆ ಪ್ರಾರಂಭವಾಗಿದೆ. ಈಗಾಗಲೇ ಸುಮಾರು 7-8 ಬೋಟುಗಳು ಪೂಜೆ ಸಲ್ಲಿಸಿ, ಸಂಭ್ರಮದಿಂದ ಮೀನುಗಾರಿಕೆಗೆ ತೆರಳಿವೆ. ದಡದಲ್ಲಿ ಉಳಿದ ಬೋಟುಗಳು ಕೂಡ ಒಂದೊಂದಾಗಿ ಮೀನುಗಾರಿಕೆ ಆರಂಭಿಸಲು ಸಿದ್ಧತೆ ನಡೆಸಿವೆ. ಹೊಸ ಋತುವಿನಲ್ಲಿ ಉತ್ತಮ ಇಳುವರಿ ಸಿಗುವ ನಿರೀಕ್ಷೆಯಲ್ಲಿ ಮೀನುಗಾರರು ಹೊಸ ಉತ್ಸಾಹದೊಂದಿಗೆ ತಮ್ಮ ಜೀವನೋಪಾಯದತ್ತ ಮುಖ ಮಾಡಿದ್ದಾರೆ.
ಈ ಭಾರೀ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವ ಹಿನ್ನಲೆ ಕಾರವಾರ ಬಂದರು ಮತ್ತಷ್ಟು ಚಟುವಟಿಕೆಯಿಂದ ಕೂಡಿರಲಿದ್ದು, ತಾಜಾ ಮೀನುಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯನ್ನು ಮೀನುಗಾರರು ಹೊಂದಿದ್ದಾರೆ.