ಕಾರವಾರ: ಗೋವಾದಿಂದ ಬರುವ ಲಾರಿ ಚಾಲಕರ ಮೇಲೆ ತಾಲೂಕಿನ ಮಾಜಾಳಿಯ ಅಂತರರಾಜ್ಯ ಚೆಕ್‌ಪೋಸ್ಟ್‌ನ ಕರ್ತವ್ಯನಿರತ ಸಿಬ್ಬಂದಿ ದೌರ್ಜನ್ಯ ಎಸಗಿರುವುದು ಖಂಡನೀಯ. ಅಂಥ ಸಿಬ್ಬಂದಿಯ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಉತ್ತರಕನ್ನಡ ಲಾರಿ ಮಾಲಕರ ಸಂಘದ ಅಧ್ಯಕ್ಷರೂ ಆಗಿರುವ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ.
ಮಾಜಾಳಿಯು ಗೋವಾ ಮತ್ತು ಕರ್ನಾಟಕದ ನಡುವೆ ಗಡಿಯಂಚಿಗಿದೆ. ಹೀಗಾಗಿ ದಿನವೂ ಸಾವಿರಾರು ಪ್ರಯಾಣಿಕ ವಾಹನಗಳು ಹಾಗೂ ಸರಕು ಸಾಗಣೆ ವಾಹನಗಳು ಸಾಗುತ್ತಿರುತ್ತವೆ. ಆದರೆ ಗೋವಾದಿಂದ ಮದ್ಯ ಸಾಗಣೆ ಮಾಡುತ್ತಾರೆಂಬ ನೆಪವೊಡ್ಡಿ ಬಡ ಚಾಲಕರ ಮೇಲೆ ಮಾತ್ರ ಮಾಜಾಳಿ ಚೆಕ್‌ಪೋಸ್ಟ್‌ನ ಸಿಬ್ಬಂದಿ ದೌರ್ಜನ್ಯ ಎಸಗುತ್ತಿದ್ದಾರೆ. ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಈ ಬಗ್ಗೆ ಸಾಕ್ಷಿಯಾಗಿ ಲಾರಿ ಚಾಲಕರೊಬ್ಬರ ವಿಡಿಯೋವೊಂದು ವೈರಲ್ ಆಗಿದೆ ಎಂದು ತಿಳಿಸಿದ್ದಾರೆ.
ಕುಮಾರ್ ಎನ್ನುವ ಕರ್ನಾಟಕದ ಚಾಲಕ ಗೋವಾದಿಂದ ಕೇರಳಕ್ಕೆ ವಾಟರ್ ಫಿಲ್ಟರ್ ಸಾಗಿಸುತ್ತಿದ್ದಾಗ ಬಾಕ್ಸ್‌ಗಳನ್ನ ತೆರೆದು ತೋರಿಸುವಂತೆ ಸಿಬ್ಬಂದಿ ಒತ್ತಾಯಿಸಿದ್ದಾರೆ. ಸುಸ್ತಾಗಿದೆ, ನೀವೇ ನೋಡಿ ಎಂದಿದ್ದಕ್ಕೆ ಚಾಲಕನನ್ನ ಎಳೆದೊಯ್ದು ಚೆಕ್‌ಪೋಸ್ಟ್‌ನ ರೂಮಿನಲ್ಲಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಚಾಲಕನ ಕಿವಿಗೆ ಏಟಾಗಿ ಕೇಳದಂತಾಗಿದೆ. ಮೊಬೈಲ್ ಹಾಗೂ ಕೀ ಕಸಿದುಕೊಂಡು ಕ್ಷಮೆ ಕೇಳಿದ ಮೇಲೆ ತಾಸಿನ ಬಳಿಕ ನೀಡಲಾಗಿದೆ. ಈ ಬಗ್ಗೆ ಆತ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಗೋವಾದಿಂದ ದಿನವೂ ಕಾರವಾರದತ್ತ ಮದ್ಯ ಸಾಗಣೆಯಾಗುತ್ತದೆ. ಪೊಲೀಸರ ರಕ್ಷಣೆಯಲ್ಲೆ ದಂಗೆಕೋರರು ಈ ದಂಧೆ ನಡೆಸುತ್ತಿದ್ದಾರೆಂಬುದನ್ನ ನಾನೇನು ಹೆಚ್ಚಾಗಿ ಹೇಳಬೇಕೆಂದೂ ಇಲ್ಲ; ಸಾರ್ವಜನಿಕರಿಗೆಲ್ಲ ತಿಳಿದಿರುವ ವಿಚಾರವೇ. ಅದಕ್ಕೆ ಸಾಕ್ಚಿಯೆಂಬಂತೆ ಪೊಲೀಸ್ ಪೇದೆಯೇ ಮದ್ಯ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದು ಪ್ರಕರಣ ದಾಖಲಾಗಿರುವುದೂ ಇದೆ. ಆದರೆ ಇಂಥವರ ಮೇಲೆ ಕ್ರಮ ಕೈಗೊಳ್ಳದವರು ಬಡ ಚಾಲಕರ ಮೇಲೆ ದರ್ಪ ತೋರುತ್ತಿದ್ದಾರೆ. ಚಾಲಕರು ಬಹಳ ಕಷ್ಟದಲ್ಲಿ ವಾಹನ ಓಡಿಸಿಕೊಂಡು ಬಂದಿರುತ್ತಾರೆ. ಇ- ವೇ ಬಿಲ್ ಪ್ರಕಾರ ನಿಗದಿತ ಸಮಯದಲ್ಲಿ ಅವರು ಸರಕನ್ನ ಸಾಗಣೆ ಮಾಡಬೇಕಿರುತ್ತದೆ. ಆದರೆ ಹೀಗೆ ಚೆಕ್‌ಪೋಸ್ಟ್ ಸಿಬ್ಬಂದಿ ಪೀಡಿಸುವುದರಿಂದ ಅವರ ಉದ್ಯೋಗದ ಮೇಲೂ ಹೊಡೆತ ಬೀಳಲಿದೆ. ಕುಮಾರ್ ಎನ್ನುವ ಚಾಲಕನ ಮೇಲೆ ಹಲ್ಲೆ ಮಾಡಿದ ಚೆಕ್‌ಪೋಸ್ಟ್ ಸಿಬ್ಬಂದಿಯ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಚಾಲಕ ಕುಮಾರ್ ಮಾಡಿರುವ ವಿಡಿಯೋವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪಶ್ಚಿಮ ವಲಯ ಐಜಿಪಿ ಹಾಗೂ ಜಿಲ್ಲಾಧಿಕಾರಿಗೆ ಕಳುಹಿಸಲಾಗಿದ್ದು, ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಮದ್ಯ ಸಾಗಣೆಯಲ್ಲಿ ಸಿಕ್ಕಿಬಿದ್ದ ಪೊಲೀಸ್ ಪೇದೆಯನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಆದರೆ ಪ್ರಕರಣದ ತನಿಖೆ ಎಲ್ಲಿಗೆ ಬಂತು ಎಂಬುದು ಯಾರಿಗೂ ತಿಳಿದಿಲ್ಲ. ಈ ಪ್ರಕರಣದಲ್ಲಿ ಚೆಕ್ ಪೋಸ್ಟ್ ನವರ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿ, ಒಂದಾನುವೇಳೆ ಗಡಿಯಿಂದ ಆರ್‌ಡಿಎಕ್ಸ್ ಇತ್ಯಾದಿಗಳನ್ನ ಸಾಗಣೆ ಮಾಡಿ ಬಂಧಿಸಿದರೂ ಅವರನ್ನು ಹೀಗೆಯೇ ಸುಮ್ಮನೆ ಬಿಡುತ್ತಿದ್ದರಾ? ಮದ್ಯ ಸಾಗಣೆ ಮಾಡಿದ ಪೊಲೀಸ್ ಪೇದೆಯ ವಿರುದ್ಧ ತನಿಖೆ ನಡೆಸಿ, ಈ ಜಾಲದಲ್ಲಿ ಇನ್ನೂ ಯಾರ್ಯಾರಿದ್ದಾರೆ ಎಂಬುದನ್ನೂ ಬಹಿರಂಗಪಡಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.