ಬ್ಯಾಟರಿ ಮಾರಾಟ ನೆಪದಲ್ಲಿ ಲಿಂಕ್ ಕಳುಹಿಸಿ 1 ಲಕ್ಷ ವಂಚನೆ
ಬ್ಯಾಟರಿ ಮಾರಾಟ ನೆಪದಲ್ಲಿ ಲಿಂಕ್ ಕಳುಹಿಸಿ 1 ಲಕ್ಷ ವಂಚನೆ
ಬ್ಯಾಟರಿ ಮಾರಾಟ ನೆಪದಲ್ಲಿ ಲಿಂಕ್ ಕಳುಹಿಸಿ 1 ಲಕ್ಷ ವಂಚನೆ
ಭಟ್ಕಳ: ಬ್ಯಾಟರಿ ಮಾರಾಟ ನೆಪದಲ್ಲಿ ಲಿಂಕ್ ಕಳುಹಿಸಿ 1 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಟ್ಕಳದ ಮಾರುಕೇರಿಯ ಕೋಟಖಂಡ ನಿವಾಸಿ ಗೋವಿಂದ ವಾಸುದೇವ ಹೆಗಡೆ(49) ವಂಚನೆಗೆ ಒಳಗಾದವರು.
ಇವರಿಗೆ ನ.27 ರಂದು ರಾತ್ರಿ 8:30ರ ಸುಮಾರಿಗೆ ಮೊಬೈಲ್ ನಂಬರ 7439461628 ನಿಂದ ವಾಟ್ಸಾಪ್ ವಿಡಿಯೋ ಕರೆಯೊಂದು ಬಂದಿತ್ತು. ವಿಡಿಯೋದಲ್ಲಿ ಕಾಣಿಸಿಕೊಂಡ ಅಪರಿಚಿತರು ತಾವು ಬ್ಯಾಟರಿ ಕಂಪನಿ ಕಡೆಯವರು ಎಂದು ಪರಿಚಯಿಸಿಕೊಂಡಿದ್ದಾರೆ. ಗೋವಿಂದ ಅವರ ಮೊಬೈಲ್‌ಗೆ ಲಿಂಕ್ ಕಳುಹಿಸಿದ ಆರೋಪಿತರು ಬ್ಯಾಟರಿ ಆರ್ಡರ್ ಮಾಡುವುದಿದ್ದಲ್ಲಿ ಲಿಂಕ್ ಕ್ಲಿಕ್ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಲಿಂಕ್ ಕ್ಲಿಕ್ ಮಾಡಿದಾಗ, 2 ರೂ. ಹಣ ಕಳುಹಿಸುವಂತೆ ತಿಳಿಸಿದ್ದಾರೆ.
ಆಗ ಅನುಮಾನಗೊಂಡ ಗೋವಿಂದ ಹೆಗಡೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಮಧ್ಯರಾತ್ರಿ 1:30ರ ಸುಮಾರಿಗೆ ಗೋವಿಂದ ಹೆಗಡೆಯವರ ಮೊಬೈಲ್‌ನಲ್ಲಿ ಬಂದಿರುವ ಮೆಸೇಜ್ ಗಮನಿಸಿದಾಗ ಶಾಕ್ ಕಾದಿತ್ತು. ಕರ್ನಾಟಕ ಬ್ಯಾಂಕಿನ ಭಟ್ಕಳ ಶಾಖೆಯಲ್ಲಿರುವ ಅವರ ಉಳಿತಾಯ ಖಾತೆಯಿಂದ 1 ಲಕ್ಷ ರೂ. ಹಣವನ್ನು ಫೋನ್‌ಪೇ ಮೂಲಕ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ.
ಈ ಕುರಿತು ಗೋವಿಂದ ಹೆಗಡೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.