ಕಾರವಾರ: ರೈಲು ಕ್ರಾಸಿಂಗ್‌ಗಾಗಿ ಅಸ್ನೋಟಿ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರ ಕೈಚೀಲ ಕಳವು ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಐ. ಜಾನ್ ಥಾಮಸ್ (56) ಅವರು ಸೆ. 30ರಂದು ಪತ್ನಿಯೊಂದಿಗೆ ತಿರುನೆಲ್ವೇಲಿ ಜಂಕ್ಷನ್‌ನಿಂದ ಮಡಗಾಂವ್ ಜಂಕ್ಷನ್‌ಗೆ ತೆರಳುತ್ತಿದ್ದ 22630 ಸಂಖ್ಯೆಯ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ಅ. 1ರ ಬೆಳಗಿನ ಜಾವ ಸುಮಾರು 3.30ಕ್ಕೆ ಕಾರವಾರ ತಾಲೂಕಿನ ಅಸ್ನೋಟಿ ರೈಲ್ವೆ ನಿಲ್ದಾಣದಲ್ಲಿ ರೈಲು ಕ್ರಾಸಿಂಗ್‌ಗಾಗಿ ನಿಂತಿದ್ದಾಗ, ಅಪರಿಚಿತರು ಅವರ ಬಿಳಿ ಬಣ್ಣದ ಕೈಚೀಲದಲ್ಲಿದ್ದ ₹1,48,399 ಮೌಲ್ಯದ ಸ್ವತ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಈ ಕುರಿತು ಜಾನ್ ಥಾಮಸ್ ಅವರು ಅ. 2ರಂದು ಗೋವಾದ ಮಡಗಾಂವ್ ಕೊಂಕಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಘಟನೆ ಚಿತ್ತಾಕುಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗಿದೆ. ಚಿತ್ತಾಕುಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

