ಕಾರವಾರ: ದಿಶಾ ಸಮಿತಿ ಸಭೆಯಲ್ಲಿ ಎರಡು ಚರಣಗಳ ಬಳಿಕ ನಿಲ್ಲಿಸಿದ್ದ ವಂದೇ ಮಾತರಂ ಗೀತೆಯನ್ನು ಮುಂದುವರಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದಾದರಾದರೂ, ಮೂರನೇ ಚರಣ ಹಾಡುವಾಗ ತಡವರಿಸಿದ ಪ್ರಸಂಗ ಬುಧವಾರ ಗಮನ ಸೆಳೆಯಿತು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿಯ ಸಭೆಯಲ್ಲಿ ಈ ಘಟನೆ ನಡೆಯಿತು. ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯ ಆರಂಭದಲ್ಲಿ ವಂದೇ ಮಾತರಂ ಗೀತೆಯ ಪೂರ್ಣ ಚರಣಗಳನ್ನು ಹಾಡಿಸುವಂತೆ ಸಂಸದ ಕಾಗೇರಿ ಒತ್ತಾಯಿಸಿದರು. ಈ ಕುರಿತು ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರೊಂದಿಗೆ ಚರ್ಚೆಯೂ ನಡೆಸಿದರು. ಆದರೆ, ಚರ್ಚೆಯ ಬಳಿಕವೂ ಸಭೆಯಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಪ್ಲೇ ಮಾಡಲಾಯಿತು.

ಎರಡು ಚರಣಗಳು ಮುಗಿದು ಹಾಡು ನಿಲ್ಲುತ್ತಿದ್ದಂತೆ ಕಾಗೇರಿ ಅವರು ಮುಂದಿನ ಚರಣವನ್ನು ಹಾಡಲು ಮುಂದಾದರು. ಅವರಿಗೆ ದಿಶಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಉಮೇಶ್ ಭಾಗ್ವತ್, ಮುಕುಂದ್ ನಾಯ್ಕ ಹಾಗೂ ಗುರುರಾಜ್ ಶಾನಭಾಗ್ ಧ್ವನಿಗೂಡಿಸಿದರು.

ಆದರೆ, ಮೂರನೇ ಚರಣ ಹಾಡುವಾಗ ಸಂಸದರು ಹಾಗೂ ಸದಸ್ಯರು ತಡವರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಿಬ್ಬಂದಿಗೆ ನಾಡಗೀತೆ ಪ್ಲೇ ಮಾಡುವಂತೆ ಸೂಚಿಸಿದರು. ಪರಿಣಾಮ, ವಂದೇ ಮಾತರಂ ಗೀತೆ ಅರ್ಧಕ್ಕೆ ನಿಂತು ನಾಡಗೀತೆ ಮೊಳಗಿತು. ಸಭೆಯಲ್ಲಿನ ಈ ಪ್ರಸಂಗ ಕುತೂಹಲಕ್ಕೆ ಕಾರಣವಾಯಿತು.