ಕಾರವಾರ: ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ಕಾಮಗಾರಿಗೆ ಅಗತ್ಯವಿರುವ ನಿರ್ಮಾಣ ಸಾಮಗ್ರಿಗಳ ಸಾಗಾಟಕ್ಕೆ ಅನುಕೂಲವಾಗುವಂತೆ ಕೈಗಾ-ಕಾರವಾರ ರಾಜ್ಯ ಹೆದ್ದಾರಿಯಿಂದ ಭಾರಿ ವಾಹನಗಳ ಸಂಚಾರದ ಮೇಲಿದ್ದ ನಿರ್ಬಂಧವನ್ನು ಜಿಲ್ಲಾಡಳಿತ ತೆರವುಗೊಳಿಸಿ ಷರತ್ತುಬದ್ಧ ಅನುಮತಿ ನೀಡಿದೆ.
ಕೈಗಾ 5 ಮತ್ತು 6 ಘಟಗಳ ನಿರ್ಮಾಣ ಕಾಮಗಾರಿಗೆ ಬೇಕಾಗಿರುವ ಸಾಮಗ್ರಿಗಳನ್ನು ಸಾಗಿಸಲು ಕಾರವಾರ - ಕೈಗಾ ರಸ್ತೆಯಿಂದ ಭಾರಿ ವಾಹನಗಳು ಅಧಿಕ ಭಾರ ತುಂಬಿ ಸಂಚರಿಸುತ್ತಿರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಇದರಿಂದ ಲಘು ವಾಹನಗಳ ಸಂಚಾರ ಕಷ್ಟದಾಯಕವಾಗಿತ್ತು. ಆದ್ದರಿಂದ ಸ್ಥಳೀಯರು ಭಾರಿವಾಹನಗಳ ಸಂಚಾರದ ವಿರುದ್ದ ಪ್ರತಿಭಟನೆ ನಡೆಸಿದ್ದರು ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ರಸ್ತೆಯಿಂದ ಭಾರಿ ಹಾಗು ಅಧಿಕ ಭಾರ ಸಾಗಿಸುವ ವಾಹನಗಳ ಸಂಚಾರ ನಿಶೇಧಿಸಿತ್ತು. ಆದರೆ ಇದೀಗ ಭಾರಿ ವಾಹನಗಳ ಸಂಚಾರಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ.
ಭಾರಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದ್ದರೂ, ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಪ್ರತಿ ಆಕ್ಸಲ್ಗೆ ಗರಿಷ್ಠ 15 ಮೆಟ್ರಿಕ್ ಟನ್ ಭಾರ ( 2 Axle - 10 Wheeler Vehicle , 3 Axle -12 Wheeler Vehicle , 4 Axle 14 Wheeler Vehicle ) ಸಾಗಿಸುವ ಕಟ್ಟುನಿಟ್ಟಿನ ಷರತ್ತು ವಿಧಿಸಲಾಗಿದೆ. ಉದಾಹರಣೆಗೆ 10 ಟೈಯರ್ ಇರುವ ವಾಹನಗಳಲ್ಲಿ ಖಾಲಿ ವಾಹನದ ಭಾರ ಸೇರಿ ಒಟ್ಟು 30 ಮೆಟ್ರಿಕ ಟನ್ ಭಾರವನ್ನು ಸಾಗಿಸಬಹುದು.
ಈ ಮಿತಿಯನ್ನು ಮೀರದಂತೆ ವಾಹನಗಳು ಸಂಚರಿಸುವ ಜವಾಬ್ದಾರಿಯನ್ನು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ವಹಿಸಿಕೊಂಡಿದೆ. 2031-32ರ ವೇಳೆಗೆ 5 ಮತ್ತು 6ನೇ ಘಟಕಗಳ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಯೋಜನೆಗೆ ಅಗತ್ಯವಾದ ಸರಕುಗಳ ಸಾಗಣೆಗೆ ಈ ಹೆದ್ದಾರಿಯೇ ಪ್ರಮುಖ ಸಂಪರ್ಕ ಮಾರ್ಗವಾಗಿದೆ.
ಹದಗೆಟ್ಟಿರುವ ರಸ್ತೆಯನ್ನು ದುರುಸ್ತಿಗೊಳಿಸುವ ಕಾರ್ಯ ಎನ್ಪಿಸಿಐಎಲ್ ಕೈಗೊಂಡಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದೆ. ಹಾಗು ಅಕ್ಟೋಬರ್ 16ರಂದು ವಾಹನ ಸಂಚಾರಕ್ಕೆ ಹೇರಿರುವ ನಿರ್ಬಂಧ ತೆರವುಗೊಳಿಸಿ ಆದೇಶ ಹೊರಡಿಸಲಾಗಿದೆ.
ಕೆರವಡಿ-ಮಲ್ಲಾಪುರ ನಡುವಿನ ರಸ್ತೆ ಪುನರ್ನಿರ್ಮಾಣ ಮತ್ತು ವಿಸ್ತರಣಾ ಕಾಮಗಾರಿಯನ್ನು ಎನ್ಪಿಸಿಐಎಲ್ ಗುತ್ತಿಗೆ ನೀಡಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ರಸ್ತೆಗೆ ಮತ್ತೆ ಯಾವುದೇ ದುರಸ್ತಿ ಅಗತ್ಯವಿದ್ದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಎನ್ಪಿಸಿಐಎಲ್ ಗೆ ಸೂಚಿಸಿದ್ದಾರೆ.



