ಕಾರವಾರ: ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದ್ದು, ಸಂಘಟನೆಯ ಬಲದೊಂದಿಗೆ ಚುನಾವಣಾ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದೇನೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರವಾರ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು.

ತಂದೆ ದಿವಂಗತ ವಸಂತ ಅಸ್ನೋಟಿಕರ್ ಹಾಗೂ ತಾಯಿ ದಿವಂಗತ ಶುಭಲತಾ ಅಸ್ನೋಟಿಕರ್ ಅವರ ಮೇಲಿನ ಜನರ ಪ್ರೀತಿ ಮತ್ತು ವಿಶ್ವಾಸ ರಾಜಕೀಯವಾಗಿ ಪ್ರೇರಣೆ ನೀಡುತ್ತಿದೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆಶೀರ್ವಾದವೂ ಇದೆ ಎಂದು ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿಯನ್ನೇ ಪ್ರಮುಖ ಗುರಿಯಾಗಿಸಿಕೊಂಡು ಜನರ ವಿಶ್ವಾಸ ಗಳಿಸುವ ಪ್ರಯತ್ನ ಮುಂದುವರಿಸುವುದಾಗಿ ಹೇಳಿದರು.