ಕಾರವಾರ : ನಗರದ ಅಲಿಗದ್ದಾದಲ್ಲಿ ಬಂದರು ಇಲಾಖೆಗೆ ಸೇರಿದ ತೆರದ ಬಾವಿಯಲ್ಲಿ ಎರಡು ಕಡೆವೆಗಳು ಬಿದ್ದು ಸಾವನ್ನಪ್ಪಿವೆ.

ಸುಮಾರು ಮೂರು ದಿನಗಳ ಹಿಂದೆ ಈ ಕಡವೆಗಳು ಬಾವಿಗೆ ಬಿದ್ದು ನೀರಿನಿಂದ ಮೇಲೆ ಬರಲಾಗದೆ ಸಾವನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಎರಡೂ ಕಡವೆಗಳು ಸುಮಾರು 8 ವರ್ಷಗಳದ್ದಾಗಿದ್ದು, ನಾಯಿ ಅಟ್ಟಿಸಿಕೊಂಡು ಬಂದಿದ್ದರಿಂದ ಬಾವಿಗೆ ಬಿದ್ದಿವೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮುಂದಿನ‌ ಕ್ರಮ ಕೈಗೊಂಡಿದ್ದಾರೆ.

ಅಲಿಗದ್ದಾದಲ್ಲಿ ಈ ಮೊದಲು ಬಂದರು ಇಲಾಖೆಯ ಕ್ವಾಟ್ರಸ್ ಗಳಿದ್ದವು. ಈ ಕ್ವಾಟ್ರಸ್ ಗಳಿಗೆ ಕುಡಿಯುವ ನೀರು ಪೂರೈಸಲು ಇಲ್ಲಿ ಬಾವಿ ತೋಡಲಾಗಿತ್ತು. ಆದರೆ ಬಾವಿಗೆ ಗೋಡೆಯನ್ನು ನಿರ್ಮಿಸದೆ ಹಾಗೆಯೇ ಬಿಟ್ಟಿಡಲಾಗಿದೆ. ಇದೀಗ ಕ್ವಾಟ್ರಸ್ ಪಾಳುಬಿದ್ದಿವೆ. ಆದರೆ ತೆರೆದ ಬಾವಿ ಇನ್ನು ಹಾಗೆಯೇ ಉಳಿದಿದೆ. ಈ ಬಾವಿಯಲ್ಲಿ ದನಕರುಗಳು ಸೇರಿದಂತೆ ಅದೇಷ್ಟೋ ಸಲ ಕಾಡು ಪ್ರಾಣಿಗಳು ಬಿದ್ದು ಸಾವನ್ನಪ್ಪಿವೆ. ಆದರೂ ಬಂದರು ಇಲಾಖೆಯವರು ಈ ಬಾವಿಗೆ ಗೋಡೆ ನಿರ್ಮಿಸುವ ಕಾರ್ಯ ಮಾಡಿಲ್ಲ. ತೆರೆದ ಬಾವಿಗೆ ಗೋಡೆ ನಿರ್ಮಿಸಬೇಕು ಅಥವಾ ಬಾವಿಯನ್ನು ಮುಚ್ಚಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.