!

ಕಾರವಾರ: ತಾಲೂಕಿನ ಮಾಜಾಳಿ ಸಮೀಪ 10 ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉತ್ತರ ಪ್ರದೇಶ ಮೂಲದ ಆರೋಪಿ ಸಂಶಾದ್‌ನನ್ನು ಮಹಾರಾಷ್ಟ್ರದ ಮುಂಬೈ ಶಿವಾಜಿನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಾಜಾಳಿಯ ಸಂದೀಪ ವರ್ಣೇಕರ ಅವರಿಗೆ ಸೇರಿದ ಅಂಗಡಿಯಲ್ಲಿ ಇಕ್ಬಾಲ್ ಎಂಬವರು ಬಾಡಿಗೆಗೆ ಸಲೂನ್ ನಡೆಸುತ್ತಿದ್ದರು. ಇಲ್ಲಿ ಕೆಲಸ ಮಾಡುತ್ತಿದ್ದ ಸಂಶಾದ್, ಅಂಗಡಿಗೆ ಬಂದಿದ್ದ 10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.

ಘಟನೆ ವೇಳೆ ಬಾಲಕಿ ಜೋರಾಗಿ ಕೂಗಿಕೊಂಡಿದ್ದು, ಆಕೆಯ ಅಕ್ಕ ಸ್ಥಳಕ್ಕೆ ಧಾವಿಸಿದ್ದಳು. ಬಳಿಕ ತಾಯಿ ಹಾಗೂ ಅಕ್ಕ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದ. ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ವಿಶೇಷ ತಂಡ ರಚಿಸಿದ್ದರು. ನಿರಂತರ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸ ಇಲಾಖೆಯ ಟೆಕ್ನಿಕಲ್ ವಿಂಗ್ ತಂಡದ ಚಿತ್ತಾಕುಲಾ ಪಿಎಸೈ ಪರಶುರಾಮ‌ ಮಿರ್ಜಗಿ, ಸಿಬ್ಬಂದಿ ಶಫಿ ಶೇಖ್ , ದೇವರಾಜ ಇವರು ಮುಂಬೈ ಶಿವಾಜಿನಗರದಲ್ಲಿ ಅಡಗಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ಕಾರವಾರಕ್ಕೆ ಕರೆತಂದಿದ್ದಾರೆ.

ಬಂಧನಕ್ಕೆ ಆಗ್ರಹಿಸಿ ನಡೆದಿತ್ತು ಪ್ರತಿಭಟನೆ

ಬಾಲಕಿ ಮೇಲಿನ ದೌರ್ಜನ್ಯದ ಆರೋಪ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿ ಬಂಧನಕ್ಕೆ ಒತ್ತಾಯಿಸಿ ಹಿಂದೂ ಸಂಘಟನೆಗಳು ಹಾಗೂ ಸಾರ್ವಜನಿಕರು ಚಿತ್ತಾಕುಲ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ, ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು. ಇದೀಗ ಆರೋಪಿಯ ಬಂಧನವಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.