ಕಾರವಾರ: 2026-27ನೇ ಸಾಲಿನ ಪೌಷ್ಟಿಕ ಆಹಾರ ವಿತರಣೆಗೆ ಸಂಬಂಧಿಸಿದಂತೆ ಎಂಟು-ಒಂಬತ್ತು ತಿಂಗಳು ಕಳೆದರೂ ಸಿದ್ಧಿ ಸಮುದಾಯದ ಫಲಾನುಭವಿಗಳಿಗೆ ಆಹಾರ ತಲುಪಿಲ್ಲ. ಕೂಡಲೇ ವಿತರಣೆ ಆರಂಭಿಸದಿದ್ದರೆ ನ.30ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಸಿದ್ಧಿ ಬುಡಕಟ್ಟು ಜನಪರ ಸಂಘ ಎಚ್ಚರಿಸಿದೆ.

ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಬೆನಿತ್ ಅಂತೋನಿ ಸಿದ್ಧಿ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಲೊರೆನ್ಸ್ ಕೈತಾನ ಸಿದ್ಧಿ, ಮಳೆ ಕೊರತೆ ಮತ್ತು ಬರದಿಂದ ಕೂಲಿ ಕೆಲಸವೂ ದೊರೆಯದೆ ಬಡ ಸಿದ್ಧಿ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಪೌಷ್ಟಿಕ ಆಹಾರ ವಿತರಣೆಯಲ್ಲೂ ವಿಳಂಬವಾಗುತ್ತಿರುವುದು ಅನ್ಯಾಯವಾಗಿದೆ ಎಂದರು.

ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳು ಕೂಡಲೇ ವಿತರಣೆ ಆರಂಭಿಸಬೇಕು. ಇಲ್ಲದಿದ್ದರೆ ನ.30ರಂದು ಸಮುದಾಯದ ಜನರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಗಸ್ತಿನ್ ಸಿದ್ಧಿ, ಬಸ್ಯಾಂವ್ ಸಿದ್ಧಿ, ಗೌರಿ ಸಿದ್ಧಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.