ಮರ ಕಟಾವು ವೇಳೆ ಬುಡಮೇಲಾದ ತೆಂಗಿನಮರ: ತಪ್ಪಿದ ಭಾರೀ ಅನಾಹುತ!
ಮರ ಕಟಾವು ವೇಳೆ ಬುಡಮೇಲಾದ ತೆಂಗಿನಮರ: ತಪ್ಪಿದ ಭಾರೀ ಅನಾಹುತ!

ಕಾರವಾರ: ನಗರದ ನಮನ್ ಬೇಕರಿಯ ಮುಂಭಾಗ ಒಣಗಿದ್ದ ತೆಂಗಿನ ಮರ ತೆರವುಗೊಳಿಸಲು ವ್ಯಕ್ತಿಯೋರ್ವ ಮರ ಏರಿದ್ದ ವೇಳೆ ಮರವು ಬುಡಸಮೇತ ಧರೆಗುರುಳಿದ ಘಟನೆ ಶುಕ್ರವಾರ ಸಂಭವಿಸಿದೆ. ಅಧೃಷ್ಟವಶಾತ್ ಮರ ಏರಿದ್ದ ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ರಸ್ತೆಯ ಬದಿಯಲ್ಲಿ ಹಲವು ದಿನಗಳಿಂದ ಒಣಗಿದ್ದ ತೆಂಗಿನ ಮರ ಕಡಿಯಲು ನಗರಸಭೆಯ ಸಿಬ್ಬಂದಿ ವ್ಯಕ್ತಿಯೋರ್ವನಿಗೆ ತಿಳಿಸಿದ್ದರು. ಈ ವೇಳೆ ಅಕ್ಕಪಕ್ಕದಲ್ಲಿದ್ದ ವಿದ್ಯುತ್ ತಂತಿಗಳನ್ನು ತೆರವು ಮಾಡಿಕೊಡುವುದಾಗಿ ಹೆಸ್ಕಾಂ ಸಿಬ್ಬಂದಿಯು ನಗರಸಭೆಯ ಸಿಬ್ಬಂದಿಗೆ ತಿಳಿಸಿದ್ದರು. ಆದರೆ ಅದಕ್ಕೂ ಮುನ್ನವೇ ನಗರಸಭೆಯ ಸಿಬ್ಬಂದಿ ಮರ ತೆರವುಗೊಳಿಸಲು ಮುಂದಾಗಿದ್ದರು.
ಮರ ತೆರವುಗೊಳಿಸಲು ಮರದ ತುದಿ ತಲುಪಿದಾಗಲೇ ವ್ಯಕ್ತಿಯ ಭಾರಕ್ಕೆ ಮರವು ಬುಡ ಸಮೇತ ರಸ್ತೆ ಬದಿ ವಾಲಿದೆ. ಕ್ಷಣಮಾತ್ರದಲ್ಲಿ ಮರವು ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಅದೃಷ್ಟವಶಾತ್ ವಿದ್ಯುತ್ ತಂತಿಯ ಮೇಲೆ ಮರವು ನಿಂತ ಕಾರಣ ವ್ಯಕ್ತಿಯ ಪ್ರಾಣ ಉಳಿಸಿದೆ. ಸದ್ಯ ವ್ಯಕ್ತಿಯೋರ್ವ ಮರದ ಸಮೇತ ಬಿದ್ದ ದೃಶ್ಯವನ್ನು ಸ್ಥಳೀಯರು ಚಿತ್ರೀಕರಿಸಿದ್ದು ಎಲ್ಲೆಡೆ ವೈರಲ್ ಆಗಿದೆ.
ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಪರಿಣಾಮ ಪಕ್ಕದ ಮೂರು ವಿದ್ಯುತ್ ಕಂಬಗಳು ಮುರಿದು ಹಾನಿಯಾಗಿದೆ. ಅಲ್ಲದೇ ಸಾಲಾಗಿ ನಿಲ್ಲಿಸಿದ್ದ ಗೂಡ್ಸ್ ವಾಹನಗಳಿಗೂ ಹಾನಿಯಾಗಿದೆ. ನಗರಸಭೆಯ ನಿರ್ಲಕ್ಷ್ಯದಿಂದಲೇ ಗೂಡ್ಸ್ ವಾಹನಗಳಿಗೆ ಹಾನಿಯಾಗಿದ್ದು ನಗರಸಭೆಯು ನಷ್ಟ ಭರಿಸಬೇಕು ಎಂದು ಚಾಲಕರು ಆಗ್ರಹಿಸಿದ್ದಾರೆ. ಘಟನೆಯಿಂದ ಹೆಸ್ಕಾಂ ಇಲಾಖೆಗೆ ಸುಮಾರು 50 ಸಾವಿರ ರೂ. ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.