ಕಾರವಾರ: ಕಾರವಾರ ಕೇರಳ ಸಮಾಜದ ವತಿಯಿಂದ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ 26ನೇ ಓಣಂ ಸಂಭ್ರಮಾಚರಣೆ ಅದ್ದೂರಿಯಾಗಿ ನಡೆಯಿತು.

ಮಹಾಬಲಿ ರಾಜನ ವೇಷಧಾರಣೆ, ಕೇರಳದ 25 ಬಗೆಯ ಸಾಂಪ್ರದಾಯಿಕ ಖಾದ್ಯಗಳ ಭೋಜನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿವಿಧ ಸಮಾಜಗಳ 700ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

2001ರಲ್ಲಿ ದಿವಂಗತ ಜಿ.ಕೆ. ರಾಮ್ ಅವರ ನೇತೃತ್ವದಲ್ಲಿ ಆರಂಭಗೊಂಡ ಓಣಂ ಆಚರಣೆಯು ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಗಳಿಸುತ್ತಿದೆ. ಅವರ ಪುತ್ರ ಪ್ರಸಾದ್ ಜಿ.ಕೆ. ರಾಮ್ ಪ್ರಸ್ತುತ ಸಮಾಜದ ರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚಲನಚಿತ್ರ ಕಲಾವಿದರಾದ ನ್ಯಾನ್ಸಿ ಮತ್ತು ದೀಪು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಯಪ್ರಕಾಶ್, ಎಂ.ಕೆ. ನಾರ್ಕಾ ಅಭಿವೃದ್ಧಿ ಅಧಿಕಾರಿ ಪರಮೇಶ್ವರನ್ ಹಾಗೂ ಮಂಗಳೂರು ಮಲಯಾಳ ಸಮಾಜದ ಅಧ್ಯಕ್ಷ ಟಿ.ಕೆ. ರಾಜನ್ ಉಪಸ್ಥಿತರಿದ್ದರು. ಚೆಂಡಮೇಳ, ಮಕ್ಕಳ ತಿರುವಾತಿರ ನೃತ್ಯ, ನಾಡನ್ ಪಾಟ್ಟು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರವಾರ ಕೇರಳ ಸಮಾಜದ ಅಧ್ಯಕ್ಷ ಪಿ.ಪಿ. ವಾಸುದೇವನ್, ಜಯಪ್ರಕಾಶ್ ಪಿಳ್ಳೈ, ಸತೀಶ್ ನಾಯರ್, ಸೋನಾಲಿ ನಾಯರ್, ಉದ್ಯಮಿಗಳಾದ ಪ್ರಜಿತ್, ಮೊಹಮ್ಮದ್, ರವಿ ನಾಯರ್, ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ಬಿ. ನಾಯಕ ಹಾಗೂ ಸ್ನೇಹಾ ನಾಯಕ ಸೇರಿದಂತೆ ಸಮಾಜದ ಪದಾಧಿಕಾರಿಗಳು ಮತ್ತು ವಿವಿಧ ಸಮಾಜಗಳ ಗಣ್ಯರು ಉಪಸ್ಥಿತರಿದ್ದರು.

ಕೇರಳದ ಸಂಸ್ಕೃತಿ, ಸಂಪ್ರದಾಯ ಹಾಗೂ ಆತಿಥ್ಯವನ್ನು ಸಾರಿದ ಈ ಆಚರಣೆಯು ವಿವಿಧ ಸಮಾಜಗಳ ಜನರನ್ನು ಒಗ್ಗೂಡಿಸಿ ಸೌಹಾರ್ದತೆಯ ಸಂದೇಶ ನೀಡಿತು.