ಸುಮಾರು 350ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈ ಹರಗಿ ಗ್ರಾಮದಲ್ಲಿ ಬಹುತೇಕರು ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಿಂದೆಲ್ಲಾ ಮದುವೆ ಮುಗಿದ ಬಳಿಕ ಕೇವಲ 10 ರಿಂದ 15 ಮಂದಿ ಆಪ್ತರಿಗೆ ಮಾತ್ರ ಸೀಮಿತವಾಗಿ ನಡೆಯುತ್ತಿದ್ದ ಈ ಬೀಗರ ಊಟ, ಈಗೀಗ ದೊಡ್ಡ ಟ್ರೆಂಡ್ ಆಗಿ ಬದಲಾಗಿದೆ.

'ಅವರು ಅಷ್ಟು ಕುರಿ ಕಡಿದಿದ್ದಾರೆ, ನಾವು ಕಮ್ಮಿ ಮಾಡಬಾರದು' ಎಂಬ ಪೈಪೋಟಿಗೆ ಬಿದ್ದು ಜನರು ಈ ಒಂದು ಸಣ್ಣ ಸಾಂಪ್ರದಾಯಿಕ ಊಟಕ್ಕೆ ಲಕ್ಷಾಂತರ ರೂಪಾಯಿ ಸುರಿಯಲಾಗುತ್ತಿದೆ.

ಈ ಪದ್ಧತಿಯು ಮೂಲತಃ ಹಳೆ ಮೈಸೂರು ಭಾಗದ ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ರಾಮನಗರ ಕಡೆಯದ್ದಾದರೂ, ಇದೀಗ ಮಲೆನಾಡಿಗೂ ವಿಸ್ತರಿಸಿದೆ. ಈ ಅನಗತ್ಯ ಸಂಪ್ರದಾಯವನ್ನ ಬೇರು ಸಮೇತ ಕೀಳಲು ಊರಿನ ಜನರೆಲ್ಲ ಸೇರಿ ಈ ಬೀಗರ ಊಟವನ್ನಾ ನಿಷೇಧ ಮಾಡಿದ್ದಾರೆ.

ಬಾಡೂಟ ರದ್ದು ಮತ್ತು ಭಾರಿ ದಂಡ

ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ತೆಗೆದುಕೊಂಡಿರುವ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಊರಿನ ನಿಯಮವನ್ನ ಮೀರಿ ಮುಂದಿನ ದಿನಗಳಲ್ಲಿ ಯಾರಾದರೂ ಬೀಗರ ಊಟ ಮಾಡಿದ್ದು ಕಂಡುಬಂದರೆ, ಅಂಥವರಿಗೆ ಬರೋಬ್ಬರಿ 1 ಲಕ್ಷ ರೂಪಾಯಿಗಳ ಭಾರಿ ದಂಡ ವಿಧಿಸಲು ತೀರ್ಮಾನಿಸಲಾಗಿದೆ.

ಕೇವಲ ಊಟ ಹಾಕುವವರಿಗೆ ಮಾತ್ರವಲ್ಲ, ಆ ಊಟಕ್ಕೆ ಹೋಗಿ ಉಂಡು ಬರುವವರಿಗೂ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಕಠಿಣ ನಿಯಮದ ಮೂಲಕ ಆರ್ಥಿಕ ಶಿಸ್ತು ತರಲು ಗ್ರಾಮಸ್ಥರು ಮುಂದಾಗಿದ್ದಾರೆ.

ಮದುವೆ ದುಂದುವೆಚ್ಚ ಮತ್ತು ಸಾಲದ ಶೂಲ

ಈಗಿನ ಕಾಲದಲ್ಲಿ ಶಾಮಿಯಾನ, ಟೇಬಲ್, ದಿನಸಿ, ಬಾಡೂಟದ ಸಾಮಗ್ರಿಗಳು ಹಾಗೂ ಬಾಣಸಿಗರ ಕೂಲಿ ಸೇರಿ ಒಂದು ಬೀಗರ ಊಟಕ್ಕೆ ಕನಿಷ್ಠ 8 ರಿಂದ 15 ಲಕ್ಷ ರೂಪಾಯಿಗಳವರೆಗೆ ಖರ್ಚಾಗುತ್ತಿದೆ. ಬಡ ಕುಟುಂಬಗಳು ಕನಿಷ್ಠ 2 ಲಕ್ಷ ರೂಪಾಯಿ ಸಾಲ ಮಾಡಿಯಾದರೂ ಊಟ ಹಾಕಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.

ಅದರಲ್ಲೂ ಈ ಹೆಣ್ಣು ಹೆತ್ತವರ ಪಾಲಿಗೆ ಇದೊಂದು ಬಹುದೊಡ್ಡ ಆರ್ಥಿಕ ಹೊರೆಯಾಗಿತ್ತು. ಇಂತಹ ಮದುವೆ ದುಂದುವೆಚ್ಚ ಮತ್ತು ಸಾಲದ ಶೂಲದಿಂದ ಜನರನ್ನ ಕಾಪಾಡಲು ಹರಗಿ ಗ್ರಾಮದ ಪ್ರಮುಖರು ಈ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.ಗ್ರಾಮಸ್ಥರ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ

ಹರಗಿ ಗ್ರಾಮಸ್ಥರು ತೆಗೆದುಕೊಂಡಿರುವ ಈ ನಿರ್ಧಾರ ಈಗ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಹರಗಿ ಸ್ವಸಹಾಯ ಸಂಘದ ಉಪಾಧ್ಯಕ್ಷ ಷಣ್ಮುಖಪ್ಪ ಕೋಡಿಹಳ್ಳಿ, "ಇತ್ತೀಚೆಗೆ ಬೀಗರ ಊಟದ ಪದ್ಧತಿ ಮಿತಿಮೀರಿದ್ದು, ಹಿಂದುಳಿದ ವರ್ಗಗಳಿಗೆ ಆರ್ಥಿಕ ಹೊರೆಯಾಗುತ್ತಿದೆ. ಹೀಗಾಗಿ ಒಗ್ಗಟ್ಟಿನಿಂದ ಈ ನಿರ್ಧಾರ ಕೈಗೊಂಡಿದ್ದೇವೆ" ಎಂದಿದ್ದಾರೆ.

ಶಿಕಾರಿಪುರ ತಾಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷರಾದ ಪ್ರಕಾಶ್ ಮುದುಬ ಸಿದ್ಧಾಪುರ ಅವರು ಸಹ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಸಂಪ್ರದಾಯಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಹೊರೆ ತಗ್ಗಲಿದ್ದು, ಇತರ ಗ್ರಾಮಗಳೂ ಸ್ವಯಂಪ್ರೇರಿತವಾಗಿ ಇಂತಹ ನಿರ್ಧಾರ ಕೈಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.