ಕಾರವಾರ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಿದರೆ ರಾಜ್ಯದಲ್ಲೂ ಬಸ್ ಪ್ರಯಾಣ ಟಿಕೆಟ್ ದರ ಕಡಿಮೆ ಮಾಡಲಾಗುವುದು ಎಂದು ಶಾಸಕ ಸತೀಶ್ ಸೈಲ್ ಹೇಳಿದರು.
ಕಾರವಾರದಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಇಂಧನ ದರ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಕೇಂದ್ರ ದರ ಏರಿಕೆ ಮಾಡಿದಾಗ ರಾಜ್ಯ ಸರ್ಕಾರ ಬಸ್ ದರ ಏರಿಸಬೇಕಾಗುತ್ತದೆ. ಕೇಂದ್ರ ದರ ಇಳಿಸಿದರೆ ನಾವೂ ಬಸ್ ದರ ಇಳಿಸುತ್ತೇವೆ. ಮುಖ್ಯಮಂತ್ರಿ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದರು.
ರೈತರಿಗಾಗಿ ಹಾಲಿನ ದರ ಏರಿಕೆ ಮಾಡಿ ಹೆಚ್ಚುವರಿ ಹಣವನ್ನು ರೈತರಿಗೆ ನೀಡಲಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಬೆಲೆ ಏರಿಕೆ ಮಾಡುತ್ತಿಲ್ಲ. ಬಿಜೆಪಿಯವರೇ ಗ್ಯಾರಂಟಿ ಯೋಜನೆಗಳ ಹೆಚ್ಚಿನ ಫಲಾನುಭವಿಗಳಾಗಿದ್ದು, ಪಟ್ಟಿ ಸಿದ್ಧವಾದ ಬಳಿಕ ಜಿಲ್ಲಾವಾರು ಪ್ರಕಟಿಸಲಾಗುವುದು ಎಂದರು.
ಅಭಿವೃದ್ಧಿ ಅನುದಾನದ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಅವಧಿಯಲ್ಲಿ ತಮಗೆ 1,500 ಕೋಟಿ ರೂ. ಅನುದಾನ ದೊರೆತಿದೆ. ಪ್ರತಿ ತಾಲೂಕಿಗೆ 50 ಕೋಟಿ ರೂ. ಹಾಗೂ ಪ್ರತಿ ಗ್ರಾ.ಪಂ.ಗೆ ಒಂದು ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಬಿಜೆಪಿ ಶಾಸಕರಿಗೂ ಕನಿಷ್ಠ ಶೇ.50ರಷ್ಟು ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.

