ಕಾರವಾರ: ಭಾರತೀಯ ಕೋಸ್ಟ್‌ಗಾರ್ಡ್‌ನ ವಿಶೇಷ ಹೋವರ್‌ಕ್ರಾಫ್ಟ್ ಗುರುವಾರ ಕಾರವಾರದ ಠಾಗೋರ್ ಕಡಲತೀರಕ್ಕೆ ಆಗಮಿಸಿ ಕೆಲಕಾಲ ನಿಲುಗಡೆ ಮಾಡಿತು. ಗೋವಾದಿಂದ ಬಂದ ನೌಕೆ ಬೆಳಿಗ್ಗೆ ಸುಮಾರು 11.30ಕ್ಕೆ ಕಡಲತೀರ ತಲುಪಿತು.
ಅರಬ್ಬೀ ಸಮುದ್ರದಲ್ಲಿ ಕರಾವಳಿ ಭದ್ರತೆಗಾಗಿ ಗಸ್ತು ನಡೆಸುವ ಈ ನೌಕೆ, ಗಸ್ತಿನ ನಡುವಿನ ವಿಶ್ರಾಂತಿಗಾಗಿ ಕಾರವಾರಕ್ಕೆ ಬಂದಿತ್ತು. ಏರ್ ಕುಷನ್ ತಂತ್ರಜ್ಞಾನ ಹೊಂದಿರುವ ಹೋವರ್‌ಕ್ರಾಫ್ಟ್ ನೀರಿನ ಮೇಲೆ ಮಾತ್ರವಲ್ಲದೆ ಕಡಿಮೆ ಆಳದ ನೀರು, ಮರಳು ಪ್ರದೇಶ ಹಾಗೂ ಸಮತಟ್ಟಾದ ಭೂಭಾಗದಲ್ಲೂ ಸಂಚರಿಸಬಲ್ಲದು.
ವೇಗವಾಗಿ ಸ್ಥಳಾಂತರಗೊಳ್ಳುವ ಸಾಮರ್ಥ್ಯ ಹೊಂದಿರುವ ಈ ನೌಕೆಯನ್ನು ಕರಾವಳಿ ನಿಗಾ, ಗಸ್ತು, ಶೋಧ–ರಕ್ಷಣಾ ಮತ್ತು ತುರ್ತು ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ. ಠಾಗೋರ್ ಕಡಲತೀರದಲ್ಲಿ ನೌಕೆಯ ಆಗಮನ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತು.

