ಕಾರವಾರ: ತಾಲೂಕಿನ ಕಿನ್ನರ ಬಳಿ ರಾಜ್ಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಮೊಟ್ಟೆ ಸಾಗಿಸುತ್ತಿದ್ದ ಟಾಟಾ ಏಸ್ ವಾಹನದ ನಡುವೆ ಭಾನುವಾರ ಅಪಘಾತ ಸಂಭವಿಸಿದ್ದು, ವಾಹನದಲ್ಲಿದ್ದ ಮೊಟ್ಟೆಗಳು ರಸ್ತೆಯಲ್ಲೇ ಒಡೆದು ಚೆಲ್ಲಾಪಿಲ್ಲಿಯಾಗಿವೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ.

ಕೇರೋಡಿಯಿಂದ ಕಾರವಾರ ಕಡೆಗೆ ಬರುತ್ತಿದ್ದ ಕಾರವಾರ ಘಟಕದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಿನ್ನರ ಕಡೆಗೆ ತೆರಳುತ್ತಿದ್ದ ಟಾಟಾ ಏಸ್ ವಾಹನ ತಿರುವಿನಲ್ಲಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಗೂಡ್ಸ್ ರಿಕ್ಷಾದ ಒಂದು ಬದಿಗೆ ಹಾನಿಯಾಗಿದ್ದು, ಅದರಲ್ಲಿದ್ದ ಮೊಟ್ಟೆಗಳು ಒಡೆದು ರಸ್ತೆಯಲ್ಲಿ ಹರಡಿವೆ.

ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಟಾಟಾ ಏಸ್‌ನ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಗಂಭೀರ ಪ್ರಾಣಾಪಾಯ ಸಂಭವಿಸಿಲ್ಲ.

ಅಪಘಾತಕ್ಕೀಡಾದ ವಾಹನಗಳು ರಸ್ತೆಯಲ್ಲೇ ನಿಂತಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.