ಕಾರವಾರ: ಹಾರ್ಮುಜ್ ಜಲಸಂಧಿಯಲ್ಲಿ ವ್ಯಾಪಾರಿ ಹಡಗಿನ ಮೇಲೆ ನಡೆದ ದಾಳಿಯಲ್ಲಿ ತಾಲೂಕಿನ ಕಡವಾಡದ ಯುವ ನಾವಿಕ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ಕಡವಾಡದ ಜಯ್ ಬಾಂದೇಕರ ಗಾಯಗೊಂಡ ಯುವಕ ಎಂದು ಮೂಲಗಳು ತಿಳಿಸಿವೆ. ಸದ್ಯ ಅವರು ಒಮಾನ್‌ನ ಖಸಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸುಟ್ಟ ಗಾಯಗಳಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಅವರ ತಾಯಿ ಆಸ್ಪತ್ರೆಗೆ ತೆರಳಿ ಮಗನ ಆರೈಕೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

ಅ. 6 ಮತ್ತು 7ರ ನಡುವೆ ಪನಾಮಾ ಧ್ವಜ ಹೊಂದಿದ್ದ ವ್ಯಾಪಾರಿ ಹಡಗಿನ ಮೇಲೆ ದಾಳಿ ನಡೆದಿದ್ದು, ಹಡಗಿನಲ್ಲಿದ್ದ ಭಾರತೀಯ ನಾವಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳಿಗೆ ಒಮಾನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ, ಕಡವಾಡದ ಜಯ್ ಬಾಂದೇಕರ ಗಾಯಗೊಂಡಿರುವ ಕುರಿತು ರಾಜ್ಯ ಸರ್ಕಾರವಾಗಲಿ, ಉತ್ತರ ಕನ್ನಡ ಜಿಲ್ಲಾಡಳಿತವಾಗಲಿ ಈವರೆಗೆ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಹೀಗಾಗಿ ಯುವಕನ ಗಾಯದ ಸ್ವರೂಪ, ಆರೋಗ್ಯ ಸ್ಥಿತಿ ಹಾಗೂ ಘಟನೆಯ ಇತರ ವಿವರಗಳು ಅಧಿಕೃತವಾಗಿ ದೃಢಪಟ್ಟಿಲ್ಲ. ಸಂಬಂಧಪಟ್ಟ ಇಲಾಖೆಗಳ ದೃಢೀಕರಣದ ಬಳಿಕವಷ್ಟೇ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.