ಕಾರವಾರ: ಕುಮಟಾದ ನೆಲ್ಲಿಕೇರಿಯ ಸರಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2026-27ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಚಿತ್ತಾಕುಲದ ಶಿವಾಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾಲೇಜಿನ ವಿದ್ಯಾರ್ಥಿನಿ ನಾಗಶ್ರೀ ನಾಯ್ಕ 400 ಮೀ. ಹರ್ಡಲ್ಸ್‌ನಲ್ಲಿ ಚಿನ್ನದ ಪದಕ, 4×100 ಮೀ. ಹಾಗೂ 4×400 ಮೀ. ರಿಲೆಯಲ್ಲಿ ಬೆಳ್ಳಿ ಮತ್ತು 400 ಮೀ. ಓಟದಲ್ಲಿ ಕಂಚಿನ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕಮಲಾ ವಡ್ಡರ ಖೋ-ಖೋ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಚೈತ್ರಾ ಯು. ನಾಯ್ಕ 3000 ಮೀ. ನಡಿಗೆಯಲ್ಲಿ ಕಂಚು ಹಾಗೂ 4×100 ಮೀ. ಮತ್ತು 4×400 ಮೀ. ರಿಲೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾಳೆ. ಪ್ರತಿಕಾ ಚಂಡೇಕರ 4×400 ಮೀ. ರಿಲೆಯಲ್ಲಿ ಬೆಳ್ಳಿ ಹಾಗೂ ಪ್ರಸನ್ನ ಕಲ್ಗುಟ್ಕರ 4×100 ಮೀ. ರಿಲೆಯಲ್ಲಿ ಬೆಳ್ಳಿ ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಅಣ್ಣಪ್ಪ ಆರ್. ನಾಯ್ಕ ತರಬೇತಿ ನೀಡಿದ್ದರು. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗ ಅಭಿನಂದಿಸಿ, ರಾಜ್ಯಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದೆ.

