ಕಾರವಾರ: ಗಂಡನ ಮನೆಮಂದಿಯ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ತಾಲೂಕಿನ ಹೊಸಾಳಿ ಗ್ರಾಮದ ದುಮ್ಮನಶಿಟ್ಟಾದಲ್ಲಿ ಸೋಮವಾರ ನಡೆದಿದೆ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುಮ್ಮನಶಿಟ್ಟಾದ ನಿಕ್ಷೀತಾ ಅಲಿಯಾಸ್ ಅಕ್ಷತಾ ನಾಯ್ಕ (34) ಮೃತಪಟ್ಟ ಮಹಿಳೆ. ಇವರ ತಾಯಿ ಮಂಗಲಾ ಮೂಡಂಗಿ ನೀಡಿದ ದೂರಿನ ಪ್ರಕಾರ, ನಿಕ್ಷೀತಾ ಅವರನ್ನು 2023ರ ಮೇ 30ರಂದು ನಿತೇಶ ನಾಯ್ಕ ಎಂಬುವವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ 2 ವರ್ಷ 8 ತಿಂಗಳ ಮಗನಿದ್ದಾನೆ.
ಕಳೆದ ಒಂದು ವರ್ಷದಿಂದ ನಿಕ್ಷೀತಾ ಅವರ ಪತಿ ನಿತೇಶ, ಅತ್ತೆ ರಾಧಾ ಹಾಗೂ ಪತಿಯ ಸಹೋದರ ಸತೀಶ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇತ್ತೀಚೆಗೆ ಕಾಮಾಕ್ಷಿ ದೇವಸ್ಥಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ಮಗುವಿನ ಚಪ್ಪಲಿ ತರಲು ಮಗುವನ್ನು ಮನೆಯ ಮೆಟ್ಟಿಲ ಬಳಿ ಬಿಟ್ಟು ಹೋದ ವಿಚಾರವಾಗಿ ಜಗಳವಾಗಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನಿಕ್ಷೀತಾ ಅವರು ತಾಯಿಗೆ ಕರೆ ಮಾಡಿ, ತಾನು ಗಂಡನ ಮನೆಯಲ್ಲಿ ಇರಲು ಇಷ್ಟವಿಲ್ಲ, ತನ್ನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಅದರಂತೆ ಅ.12ರಂದು ಬೆಳಗ್ಗೆ ತಾಯಿ ಮಂಗಲಾ ಅವರು ಮಗಳ ಮನೆಗೆ ತೆರಳಿದಾಗ, ಮನೆಯ ಮೇಲ್ಮಹಡಿಯ ಮಲಗುವ ಕೋಣೆಯಲ್ಲಿ ನಿಕ್ಷೀತಾ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಪತಿ ನಿತೇಶ, ಅತ್ತೆ ರಾಧಾ ಹಾಗೂ ಪತಿಯ ಸಹೋದರ ಸತೀಶ ವಿರುದ್ಧ ದೂರು ನೀಡಲಾಗಿದ್ದು, ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

