ಕುಮಟಾ: ಕಾಡಿನಿಂದ ನಾಡಿನತ್ತ ಬಂದ ಚಿರತೆಯೊಂದು ಕಡವೆಯನ್ನು ಬೆನ್ನಟ್ಟಿಕೊಂಡು ತೋಟಕ್ಕೆ ನುಗ್ಗಿ ಕೊಂದು, ಅದರ ಮಾಂಸವನ್ನು ತಿಂದು ಕಾಡಿಗೆ ಮರಳಿದ ಘಟನೆ ತಾಲೂಕಿನ ಅಂತ್ರವಳ್ಳಿ ಗ್ರಾಮದ ಬರಗದ್ದೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಕಾಡಿನಿಂದ ಕಡವೆಯನ್ನು ಓಡಿಸಿಕೊಂಡು ಬಂದ ಚಿರತೆ ತೋಟದಲ್ಲಿ ಅದರ ಮೇಲೆ ದಾಳಿ ನಡೆಸಿ ಕೊಂದುಹಾಕಿದೆ. ಈ ವೇಳೆ ಅಕ್ಕಪಕ್ಕದ ಮನೆಗಳ ನಾಯಿಗಳು ಜೋರಾಗಿ ಬೊಗಳಲಾರಂಭಿಸಿದ್ದು, ಎಚ್ಚೆತ್ತುಕೊಂಡ ಚಿರತೆ ಕಡವೆಯ ದೇಹದ ಭಾಗಶಃ ಮಾಂಸವನ್ನು ತಿಂದು ಕಾಡಿನತ್ತ ತೆರಳಿದೆ ಎನ್ನಲಾಗಿದೆ.

ಘಟನೆ ಬುಧವಾರ ಬೆಳಕಿಗೆ ಬಂದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡುಪ್ರಾಣಿಗಳ ನಾಡಿನತ್ತದ ಸಂಚಾರ ಗ್ರಾಮೀಣ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.