ನವದೆಹಲಿ: ದೇಶೀಯ ಹಡಗು ನಿರ್ಮಾಣ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದ್ದು, ಎಲ್ ಆ್ಯಂಡ್ ಟಿ ಸಂಸ್ಥೆ ನಿರ್ಮಿಸಿದ ಭಾರತದ ಮೊದಲ ಬಹುಪಯೋಗಿ ಹಡಗು ‘ಐಎನ್ಎಸ್ ಸಮರ್ಥಕ್’ ಅ.16ರಂದು ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ.
ಭಾರತದ ಉಪರಾಷ್ಟ್ರಪತಿ ಚಂದ್ರಪುರಂ ಪೊನ್ನುಸಾಮಿ ರಾಧಾಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹಡಗನ್ನು ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ಕರ್ನಾಟಕದ ರಾಜ್ಯಪಾಲರು, ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಎಲ್ ಆ್ಯಂಡ್ ಟಿ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಎಲ್ ಆ್ಯಂಡ್ ಟಿ ಹಡಗು ನಿರ್ಮಾಣ ಘಟಕದಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾದ ಐಎನ್ಎಸ್ ಸಮರ್ಥಕ್, ಭಾರತೀಯ ಖಾಸಗಿ ಹಡಗು ನಿರ್ಮಾಣ ಸಂಸ್ಥೆಯೊಂದು ನಿರ್ಮಿಸಿದ ಮೊದಲ ಪ್ರಮುಖ ಯುದ್ಧನೌಕೆಯಾಗಿದೆ. ಹಡಗಿನಲ್ಲಿ ಶೇ.75ಕ್ಕೂ ಹೆಚ್ಚು ಸ್ವದೇಶಿ ಬಿಡಿಭಾಗಗಳನ್ನು ಬಳಸಲಾಗಿದ್ದು, ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಮತ್ತಷ್ಟು ಬಲ ನೀಡಿದೆ.
ವಿವಿಧ ಕಾರ್ಯಾಚರಣೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿರುವ ಈ ಹಡಗು, ದೇಶೀಯವಾಗಿ ಅಭಿವೃದ್ಧಿಪಡಿಸಿದ ಹೊಸ ಸಂವೇದಕಗಳು ಮತ್ತು ಶಸ್ತ್ರಾಸ್ತ್ರಗಳ ಪರೀಕ್ಷೆ ಹಾಗೂ ತರಬೇತಿಗೆ ಬಳಕೆಯಾಗಲಿದೆ. ಅಲ್ಲದೆ, ಕಡಲ್ಗಾವಲು, ವಿಚಕ್ಷಣ, ಕರಾವಳಿಯಾಚೆಗಿನ ಗಸ್ತು ಹಾಗೂ ವಿಪತ್ತು ಸಂದರ್ಭಗಳಲ್ಲಿ ಮಾನವೀಯ ನೆರವು ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯ ಹೊಂದಿದೆ.
‘ಸಮರ್ಥಕ್’ ಎಂದರೆ ಬೆಂಬಲ ನೀಡುವವನು ಅಥವಾ ಪ್ರೋತ್ಸಾಹಕ ಎಂದರ್ಥ. ಹೆಸರಿಗೆ ತಕ್ಕಂತೆ ವಿವಿಧ ಕಾರ್ಯಾಚರಣೆಗಳಿಗೆ ನೆರವಾಗುವ ರೀತಿಯಲ್ಲಿ ಹಡಗನ್ನು ರೂಪಿಸಲಾಗಿದೆ. ಇದರ ನಿರ್ಮಾಣವು ದೇಶೀಯ ಉದ್ಯೋಗ ಸೃಷ್ಟಿ, ತಾಂತ್ರಿಕ ಸಾಮರ್ಥ್ಯ ವೃದ್ಧಿ ಹಾಗೂ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗಿದೆ.
ಐಎನ್ಎಸ್ ಸಮರ್ಥಕ್ ಸೇರ್ಪಡೆಯಿಂದ ಭಾರತದ ಕಡಲ ಭದ್ರತೆ ಬಲಗೊಳ್ಳಲಿದ್ದು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪ್ರಾದೇಶಿಕ ಸ್ಥಿರತೆ ಮತ್ತು ಸಹಕಾರಕ್ಕೂ ನೆರವಾಗಲಿದೆ. ಬದಲಾಗುತ್ತಿರುವ ಕಡಲ ಬೆದರಿಕೆಗಳನ್ನು ಎದುರಿಸಲು ಹಾಗೂ ನೌಕಾಪಡೆಯ ಕಾರ್ಯಾಚರಣಾ ಸಾಮರ್ಥ್ಯ ಹೆಚ್ಚಿಸಲು ಈ ಹಡಗು ಪ್ರಮುಖ ಪಾತ್ರ ವಹಿಸಲಿದೆ.





