ಕಾರವಾರ:ಕದ್ರಾ ಡ್ಯಾಮ್ನಿಂದ ಪೂರೈಸುವ ನೀರಿನ ವಿಕಿರಣ ಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸನಾತನ ಸ್ವರಾಜ್ಯ ಸಂಘ, ಕಾರವಾರದ 14 ಗ್ರಾಮ ಪಂಚಾಯಿತಿಗಳ ಜನರಿಗೆ ಕೊಡಸಳ್ಳಿ ಡ್ಯಾಮ್ನಿಂದ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿದೆ.
ಈ ಕುರಿತು ಸಂಘದ ಅಧ್ಯಕ್ಷ ವಿನಾಯಕ ಕಾಶಿನಾಥ ಸಾವಂತ ಅವರು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಹಿಂದೆ ಆ.24ರಂದು ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಕೈಗಾ ಘಟಕದಿಂದ ವರದಿ ತರಿಸಿಕೊಳ್ಳಲಾಗಿದ್ದು, ಪ್ರತಿ ತಿಂಗಳ ವರದಿಯಲ್ಲಿ 8.0, 9.0, 10.0 ಎಂಬ ಡಿಟೆಕ್ಷನ್ ಲಿಮಿಟ್ ದಾಖಲಾಗಿರುವುದನ್ನು ಉಲ್ಲೇಖಿಸಿರುವ ಸಂಘದ ಅಧ್ಯಕ್ಷರು, ಕದ್ರಾ ಬದಲು ಕೊಡಸಳ್ಳಿ ಡ್ಯಾಮ್ನ ನೀರನ್ನು ಪೂರೈಸುವಂತೆ ಒತ್ತಾಯಿಸಿದ್ದಾರೆ.
ಕೊಡಸಳ್ಳಿ ಡ್ಯಾಮ್ನ ನೀರಿನಲ್ಲಿ ವಿಕಿರಣದ ಪ್ರಮಾಣ ಶೂನ್ಯವಾಗಿದ್ದು, ಅದು ಕುಡಿಯಲು ಯೋಗ್ಯವಾಗಿದೆ ಎಂಬುದು ಸಂಘದ ವಾದವಾಗಿದೆ. ಕದ್ರಾ ನೀರಿನಲ್ಲಿ ದಾಖಲಾಗಿರುವ ವಿಕಿರಣ ಮಟ್ಟ ಭವಿಷ್ಯದಲ್ಲಿ ಹೆಚ್ಚಾಗುವ ಸಾಧ್ಯತೆಯಿದ್ದು, ಇದರಿಂದ ಜನರ ಆರೋಗ್ಯಕ್ಕೆ ಅಪಾಯ ಎದುರಾಗಬಹುದು ಎಂಬ ಆತಂಕವನ್ನೂ ಮನವಿಯಲ್ಲಿ ವ್ಯಕ್ತಪಡಿಸಲಾಗಿದೆ.
ಕೈಗಾ, ಭಾರತೀಯ ನೌಕಾನೆಲೆ, ಕದ್ರಾ ಮತ್ತು ಕೊಡಸಳ್ಳಿ ಡ್ಯಾಮ್ನಂತಹ ಯೋಜನೆಗಳಿಗಾಗಿ ಕಾರವಾರದ ಜನರು ತಮ್ಮ ಮನೆಮಠಗಳನ್ನು ತ್ಯಾಗ ಮಾಡಿದ್ದಾರೆ. ಹೀಗಿರುವಾಗ ಶುದ್ಧ ನೀರಿನ ಆಯ್ಕೆ ಇದ್ದರೂ ವಿಕಿರಣದ ಆತಂಕವಿರುವ ನೀರನ್ನು ಪೂರೈಸುವುದು ನ್ಯಾಯವೇ ಎಂದು ಸಂಘ ಪ್ರಶ್ನಿಸಿದೆ.
ಸರ್ಕಾರ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮನವಿಯನ್ನು ಮರುಪರಿಶೀಲಿಸಿ ಕೊಡಸಳ್ಳಿ ಡ್ಯಾಮ್ನಿಂದಲೇ ಕುಡಿಯುವ ನೀರು ಪೂರೈಸಬೇಕು. ಇಲ್ಲದಿದ್ದರೆ ಕಾರವಾರದ 14 ಗ್ರಾಮ ಪಂಚಾಯಿತಿಗಳ ಜನರು ಈ ನೀರನ್ನು ಬಹಿಷ್ಕರಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಸನಾತನ ಸ್ವರಾಜ್ಯ ಸಂಘದ ಅಶೋಕ ಮಹಾದೇವ ರಾಣೆ, ಗುರು ಸಾವಂತ, ಸಂದೀಪ ಕಲ್ಗುಟ್ಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


