ಕಾರವಾರ: ಭ್ರಷ್ಟಾಚಾರ, ಕಳ್ಳತನ ಮಾಡುವವರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿದರೆ ಒಳ್ಳೆಯದು. ಆದರೆ, ಇಂತಹ ವಿಷಯಗಳ ಬಗ್ಗೆ ಸ್ಟಿಂಗ್ ಮಾಡುವುದು ಸಮಂಜಸವಲ್ಲ ಎಂದು ಕಾರ್ಮಿಕ ಖಾತೆ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಎಫ್ಐಆರ್ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ದಾಖಲಾಗಿದೆಯೇ ಅಥವಾ ಅವರ ಆಪ್ತರ ವಿರುದ್ಧ ದಾಖಲಾಗಿದೆಯೇ ಎಂಬುದು ತಮಗೆ ತಿಳಿದಿಲ್ಲ. ಈ ಕುರಿತು ಮಾಹಿತಿ ಪಡೆಯಲು ತಮ್ಮ ಬಳಿ ಗೃಹ ಖಾತೆ ಇಲ್ಲ ಎಂದರು.
ಬಿಜೆಪಿ ಅಭಿವೃದ್ಧಿಯ ಆಧಾರದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಹಿಂದೂ-ಮುಸ್ಲಿಂ ಭಾವನಾತ್ಮಕ ವಿಚಾರಗಳನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತದ ಸಾಧನೆ ಏನು ಎಂಬುದನ್ನು ಮಾಧ್ಯಮಗಳು ಪ್ರಶ್ನಿಸಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಅದಾನಿ, ಅಂಬಾನಿ ಅವರ ಸಾಲದ ಬಗ್ಗೆ ಮಾತ್ರ ಗಮನಹರಿಸುತ್ತಿದ್ದು, ಸಣ್ಣ ಉದ್ದಿಮೆದಾರರು ಮತ್ತು ವ್ಯಾಪಾರಿಗಳ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ ಅವರು, ದೇಶದಲ್ಲಿ ನಿರುದ್ಯೋಗ ಹೆಚ್ಚಿದ್ದು, ಶಿಕ್ಷಣ ಖಾಸಗೀಕರಣದಿಂದ ಬಡ ಮತ್ತು ಮಧ್ಯಮ ವರ್ಗದವರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಜಿ.ಟಿ. ನಾಯ್ಕ, ಕಾಂಗ್ರೆಸ್ ಮುಖಂಡ ವಿ.ಎಸ್. ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲ್ಗುಟ್ಕರ್ ಮತ್ತಿತರರು ಉಪಸ್ಥಿತರಿದ್ದರು.

