ಅಂಕೋಲಾ: ಅಡಿಕೆ ತೋಟದಲ್ಲಿ ಕಡವೆ ಬೇಟೆಯಾಡಿ, ಮಾಂಸವನ್ನು ಚೀಲಗಳಲ್ಲಿ ತುಂಬುತ್ತಿದ್ದ ತಂಡದ ಮೇಲೆ ಅರಣ್ಯ ಇಲಾಖೆ ದಾಳಿ ನಡೆಸಿದ್ದು, ಓರ್ವ ಆರೋಪಿಯನ್ನು ಬಂಧಿಸಿ ಐವರು ಪರಾರಿಯಾಗಿದ್ದಾರೆ.
ತಾಲೂಕಿನ ಕಲ್ಲೇಶ್ವರ ಗ್ರಾಮದ ಲಕ್ಷ್ಮಣ ಬಾಬು ಸಿದ್ದಿ ಅವರ ಅಡಿಕೆ ತೋಟದಲ್ಲಿ ಅಕ್ಟೋಬರ್ 16ರಂದು ರಾತ್ರಿ ಈ ಕಾರ್ಯಾಚರಣೆ ನಡೆದಿದೆ. ರಾಮನಗುಳಿ ವಲಯದ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ದೊರೆತ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ವೇಳೆ, ಆರು ಜನರ ತಂಡ ಕಡವೆಯನ್ನು ಕೊಂದು, ಚರ್ಮ ಬೇರ್ಪಡಿಸಿ ಮಾಂಸವನ್ನು ಚೀಲಗಳಲ್ಲಿ ತುಂಬುತ್ತಿರುವುದು ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಚನ್ನೇಮನೆಯ ನಾರಾಯಣ ಗುರಕ್ಯಾ ಸಿದ್ದಿ (60) ಬಂಧಿತ ಆರೋಪಿ. ಆತನನ್ನು ಅಂಕೋಲಾ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಗಣೇಶ ರಾಮು ರಾಠೋಡ (27), ಲಕ್ಷ್ಮಣ ಬಾಬು ಸಿದ್ದಿ (55), ಲೋಕೇಶ ನಾರಾಯಣ ಸಿದ್ದಿ (50), ಶಿವರಾಜ ಲಕ್ಷ್ಮಣ ಸಿದ್ದಿ (30) ಹಾಗೂ ರಾಜು ಕೃಷ್ಣಾ ಸಿದ್ದಿ (45) ಪರಾರಿಯಾಗಿದ್ದು, ಅವರ ಪತ್ತೆಗೆ ಶೋಧ ಮುಂದುವರಿದಿದೆ.
ದಾಳಿ ವೇಳೆ ಕಡವೆಯ ಮಾಂಸ, ತಲೆ, ಕಾಲು, ಚರ್ಮ ಸೇರಿದಂತೆ ಇತರ ಅಂಗಾಂಗಗಳಿದ್ದ ಮೂರು ಚೀಲಗಳು, ಮೂರು ಕತ್ತಿ, ಒಂದು ಚಾಕು ಹಾಗೂ ಹೆಡ್ಟಾರ್ಚ್ ಜಪ್ತಿ ಮಾಡಲಾಗಿದೆ. ಅಲ್ಲದೆ, ಅಂದಾಜು ₹1.5 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಎಸ್. ಮಾರಿಯಪ್ಪ ಅವರ ನಿರ್ದೇಶನ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಫುಲ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ರಾಮನಗುಳಿ ವಲಯ ಅರಣ್ಯಾಧಿಕಾರಿ ದೀಪಕ್ ಎ. ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳು, ಅರಣ್ಯ ಪಾಲಕರು ಹಾಗೂ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.

