ಕಾರವಾರ: ಕುಡಿದ ಮತ್ತಿನಲ್ಲಿ ಮೊಟ್ಟೆ ಸಾಗಿಸುತ್ತಿದ್ದ ಟಾಟಾ 407 ವಾಹನವನ್ನು ಅಜಾಗರೂಕತೆಯಿಂದ ಚಲಾಯಿಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ತಾಲೂಕಿನ ಅಮದಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರಿನಿಂದ ಮೊಟ್ಟೆ ತುಂಬಿಕೊಂಡು ಬಂದಿದ್ದ ಕೆಎ-30 ಎ-5880 ನೋಂದಣಿ ಸಂಖ್ಯೆಯ ಟಾಟಾ 407 ವಾಹನ ಅಂಕೋಲಾದಲ್ಲಿ ಮೊಟ್ಟೆ ಖಾಲಿ ಮಾಡಿ ಕಾರವಾರದತ್ತ ಬಂದಿತ್ತು. ಅಮದಳ್ಳಿ ಅಂಗಡಿಗೆ ಮೊಟ್ಟೆ ಹಾಕಲು ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ರೀತಿಯಲ್ಲಿ ವಾಹನ ಚಲಾಯಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿದಾಗ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಗೆ ಗುದ್ದಿದೆ. ಬಳಿಕ ವಾಹನವನ್ನು ಸಾರ್ವಜನಿಕರತ್ತ ಚಲಾಯಿಸಲು ಮುಂದಾದಾಗ ಜೀವ ಉಳಿಸಿಕೊಳ್ಳಲು ಜನರು ಓಡಿ ಬದಿಗೆ ಸರಿದಿದ್ದಾರೆ.

ಚಾಲಕ ಕುಡಿದ ಮತ್ತಿನಲ್ಲಿರುವುದನ್ನು ಗಮನಿಸಿದ ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯ ಮೀನುಗಾರ ಮಹಿಳೆಯೊಬ್ಬರು ಕೂಡ ಚಾಲಕನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.