ಕಾರವಾರ: ಮೀನುಗಾರಿಕಾ ಬೋಟ್ನಲ್ಲಿ ಹಿಡಿದ ಮೀನುಗಳಿಂದ ಹೊರಸೂಸಿದ ವಿಷಾನಿಲ ಸೇವನೆಯಿಂದ ಇಬ್ಬರು ಮೀನುಗಾರರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದಗಾ ಗ್ರಾಮದ ಮೀನುಗಾರಿಕಾ ಬಂದರಿನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಮೂಕಾಂಬಿಕಾ ಹೆಸರಿನ ಮೀನುಗಾರಿಕಾ ಬೋಟ್ನಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೋಟ್ನ ಶೇಖರಣಾ ಘಟಕದಲ್ಲಿ ಸಂಗ್ರಹಿಸಿದ್ದ ‘ಚಮನ್’ ಎಂಬ ಮೀನುಗಳನ್ನು ಖಾಲಿ ಮಾಡುವ ಹಾಗೂ ಶೇಖರಣಾ ಘಟಕವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮೃತರನ್ನು ಒಡಿಶಾ ಮೂಲದ ಪುರಂದರ ಬಿಸರಾ (21) ಮತ್ತು ಆಕಾಶ ನಾಯ್ಕ (24) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಲಾಲಿಂದರ ಧ್ರುವ (41) ಎಂಬವರು ಗಂಭೀರವಾಗಿ ಅಸ್ವಸ್ಥರಾಗಿದ್ದು, ಕಾರವಾರದ ಕ್ರಿಮ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ ಬೆಳಿಗ್ಗೆ ವೇಳೆಗೆ ಮುದಗಾ ಬಂದರಿನಲ್ಲಿ ಈ ಘಟನೆ ನಡೆದಿದೆ. ಶೇಖರಣಾ ಘಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ‘ಚಮನ್’ ಮೀನು ಸಂಗ್ರಹಿಸಲಾಗಿತ್ತು ಎನ್ನಲಾಗಿದ್ದು, ಮೀನುಗಳಿಂದ ಹೊರಸೂಸಿದ ವಿಷಾನಿಲದಿಂದಾಗಿ ಕಾರ್ಮಿಕರು ಉಸಿರಾಟದ ತೊಂದರೆಗೆ ಒಳಗಾಗಿ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.
ಅಸ್ವಸ್ಥಗೊಂಡ ಮೂವರನ್ನೂ ಬೆಲೇಕೇರಿಯ ಸಚಿನ್ ಖಾರ್ವಿ ಅವರು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಇಬ್ಬರು ಕೆಲಸಗಾರರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದಕ್ಕೂ ಕೆಲ ದಿನಗಳ ಹಿಂದಷ್ಟೇ ಗೋಕರ್ಣ ಸಮೀಪದ ತದಡಿ ಮೀನುಗಾರಿಕಾ ಬಂದರಿನಲ್ಲಿ ಇದೇ ರೀತಿಯ ಘಟನೆ ಸಂಭವಿಸಿ ಮೂವರು ಮೀನುಗಾರರು ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. ಆ ಘಟನೆ ನಡೆದ ನಾಲ್ಕೇ ದಿನಗಳ ಅಂತರದಲ್ಲಿ ಮುದಗಾ ಬಂದರಿನಲ್ಲಿ ಮತ್ತೊಂದು ದುರಂತ ಸಂಭವಿಸಿರುವುದು ಮೀನುಗಾರಿಕಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ವಾರದೊಳಗೆ ಮೀನುಗಾರಿಕಾ ಬೋಟ್ಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ ಐವರು ಮೀನುಗಾರರು ಮೃತಪಟ್ಟಿದ್ದು, ಹಲವರು ಅಸ್ವಸ್ಥಗೊಂಡಿದ್ದಾರೆ. ಸತತ ಘಟನೆಗಳ ಹಿನ್ನೆಲೆಯಲ್ಲಿ ಮೀನುಗಾರಿಕಾ ಬೋಟ್ಗಳಲ್ಲಿ ಕಾರ್ಮಿಕರ ಸುರಕ್ಷತೆ, ಶೇಖರಣಾ ಘಟಕಗಳಲ್ಲಿ ವಿಷಾನಿಲ ಉಂಟಾಗುವ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸುವ ಅಗತ್ಯದ ಕುರಿತು ಚರ್ಚೆ ಆರಂಭವಾಗಿದೆ.

