ಕುಮಟಾ: ತಾಲೂಕಿನ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಭಾರಿ ದುರಂತವೊಂದು ಸಂಭವಿಸಿದೆ. ಮೀನುಗಾರಿಕಾ ಬೋಟ್ನಲ್ಲಿ ಉಸಿರುಗಟ್ಟಿ ಮೂವರು ಮೀನುಗಾರರು ದಾರುಣವಾಗಿ ಸಾ*ವನ್ನಪ್ಪಿರುವ ಘಟನೆ ನಡೆದಿದೆ.
ತದಡಿ ಬಂದರಿನ 'ಕುಚೈಮಾ' ಹೆಸರಿನ ಬೋಟ್ನಲ್ಲಿ ಕೆಲಸ ಮಾಡುತ್ತಿದ್ದ ಮೀನುಗಾರರು ಈ ದುರ್ಘಟನೆಗೆ ಬಲಿಯಾಗಿದ್ದಾರೆ. ಮೃ*ತರನ್ನು ನೌಶಾದ್ (48), ಅಮೀನ್ (40) ಹಾಗೂ ಅಮನ್ (26) ಎಂದು ಗುರುತಿಸಲಾಗಿದೆ.
ಮೀನಿನ ಸ್ಟೋರೇಜ್ ಸ್ವಚ್ಛಗೊಳಿಸುವಾಗ ಅವಘಡ
ಮೀನುಗಾರರು 'ಚಮನ್' ಎಂಬ ಮೀನಿನ ಶಿಕಾರಿ ಮಾಡಿಕೊಂಡು ತದಡಿ ಬಂದರಿಗೆ ಮರಳಿದ್ದರು. ಬಂದರಿಗೆ ಬಂದ ಬಳಿಕ ಬೋಟ್ನಲ್ಲಿದ್ದ ಮೀನುಗಳನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದಾರೆ. ಆನಂತರ ಮೀನು ಸಂಗ್ರಹಿಸಿಟ್ಟಿದ್ದ ಸ್ಟೋರೇಜ್ ಸ್ಥಳವನ್ನು (Fish Hold) ಸ್ವಚ್ಛಗೊಳಿಸಲು ಮೀನುಗಾರರು ಕೆಳಗೆ ಇಳಿದಿದ್ದಾರೆ. ಈ ವೇಳೆ ಕೊಳೆತ ಮೀನಿನಿಂದ ಉತ್ಪತ್ತಿಯಾಗಿದ್ದ ವಿಷಕಾರಿ ಅನಿಲ (ವಾಸನೆ) ಮೂಗಿಗೆ ಬಡಿದು ಉಸಿರುಗಟ್ಟಿ ಈ ಮೂವರು ಪ್ರಾಣಬಿಟ್ಟಿದ್ದಾರೆ.
ಇಬ್ಬರ ರಕ್ಷಣೆ, ಓರ್ವನ ಸ್ಥಿತಿ ಗಂಭೀರ
ಬೋಟ್ನಲ್ಲಿದ್ದ ಇತರ ಇಬ್ಬರು ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಅವರಲ್ಲಿ ಓರ್ವನ ಸ್ಥಿತಿ ತೀರಾ ಚಿಂತಾಜನಕವಾಗಿದೆ. ಅಸ್ವಸ್ಥಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದುರ್ಘಟನೆಯ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪಿಐ ಶ್ರೀಧರ್ ಎಸ್.ಆರ್ ಸೇರಿದಂತೆ ಪೊಲೀಸರ ತಂಡ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


