ಮಂಗಳೂರು: ಎಂಆರ್‌ಪಿಎಲ್‌ನ ಕೋಕರ್ ಹೈಡೋಟ್ರೇಟರ್ ಘಟಕದ ಕೋಲ್ಡ್ ಸೆಪರೇಟರ್‌ನಲ್ಲಿ ಬುಧವಾರ ಮಧ್ಯಾಹ್ನ ಹೆಚ್ಚಿನ ಒತ್ತಡದ ವೇಳೆ ಬಿರುಕು ಉಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು, ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕೇರ (30) ಮೃತಪಟ್ಟಿದ್ದಾರೆ. ಘಟನೆಯಲ್ಲಿ ರಾಜೇಶ್ ಎಂಬುವವರಿಗೆ ಶೇ.35ರಷ್ಟು ಸುಟ್ಟ ಗಾಯಗಳಾಗಿದ್ದು, ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಎಂಟು ಮಂದಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.
ಘಟನೆಯ ತೀವ್ರತೆಗೆ ಸುತ್ತಮುತ್ತಲಿನ ಮನೆಗಳು ಹಾಗೂ ಕಟ್ಟಡಗಳಲ್ಲಿ ಕಂಪನ ಉಂಟಾಗಿದ್ದು, ಸ್ಥಳೀಯ ಚರ್ಚ್‌ನ ಹಂಚು ಒಡೆದಿದೆ ಎನ್ನಲಾಗಿದೆ. ಬಜ್ಪೆ ವಿಮಾನ ನಿಲ್ದಾಣದಲ್ಲೂ ಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಸಂಬಂಧಿತ ಘಟಕದ ಬ್ಯಾಟರಿ ಲಿಮಿಟ್‌ಗಳನ್ನು ಪ್ರತ್ಯೇಕಿಸಿ, ಎಂಆರ್‌ಪಿಎಲ್‌ನ ತುರ್ತು ಪ್ರತಿಕ್ರಿಯಾ ಹಾಗೂ ಅಗ್ನಿಶಾಮಕ ತಂಡಗಳು ಬೆಂಕಿ ನಂದಿಸಿವೆ. ಸದ್ಯ ಬೆಂಕಿ ನಿಯಂತ್ರಣದಲ್ಲಿದ್ದು, ಪರಿಸ್ಥಿತಿಯನ್ನು ಅಧಿಕಾರಿಗಳು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಎಂಆರ್‌ಪಿಎಲ್ ತಿಳಿಸಿದೆ.

