ಕಾರವಾರ: ಗಣಪತಿ ಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಕಾರವಾರ ತಾಲೂಕಿನ ಹಣಕೋಣ ಮೂಲದ ವಿಶ್ವೇಶ ವಿನೋದ ನಾಯ್ಕ (21) ಎಂದು ಗುರುತಿಸಲಾಗಿದೆ.
ಘಟನೆ ವಿವರ:
ಮೂಲತಃ ಹಣಕೋಣ ನಿವಾಸಿಯಾಗಿದ್ದ ವಿಶ್ವೇಶ ತನ್ನ ಕುಟುಂಬದೊಂದಿಗೆ ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ವಾಸವಾಗಿದ್ದ. ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಮಚ್ಚೆ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜಿಸಲು ಯುವಕರು ಕೆರೆಗೆ ತೆರಳಿದ್ದರು.
ಮೂರ್ತಿ ವಿಸರ್ಜನೆ ಮುಗಿಸಿ ಎಲ್ಲರೂ ದಡಕ್ಕೆ ಮರಳುತ್ತಿದ್ದಾಗ ವಿಶ್ವೇಶ ಮಾತ್ರ ಹಿಂದೆ ಉಳಿದಿದ್ದಾನೆ. ಈಜು ಬಲ್ಲವನಾಗಿದ್ದರೂ ಆಯಾಸದಿಂದ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ. ನೀರಿನಲ್ಲಿ ಮುಳುಗುತ್ತಾ ಕೈ ಮೇಲೆತ್ತಿ ರಕ್ಷಣೆಗಾಗಿ ಪರದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೂಡಲೇ ಸ್ಥಳೀಯರು, ಅಗ್ನಿಶಾಮಕ ದಳ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರೂ ವಿಶ್ವೇಶನನ್ನು ಜೀವಂತವಾಗಿ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಸಂಜೆ 6 ಗಂಟೆ ಸುಮಾರಿಗೆ ಮೃತದೇಹ ಪತ್ತೆಯಾಗಿದೆ.
ಮೃತ ವಿಶ್ವೇಶನ ಮೃತದೇಹವನ್ನು ಶನಿವಾರ ಸಂಜೆ ಸ್ವಗ್ರಾಮ ಹಣಕೋಣಕ್ಕೆ ತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

