ಭಟ್ಕಳ: ರಾಷ್ಟ್ರೀಯ ಹೆದ್ದಾರಿ-66ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಬಿಳಿ ಬಣ್ಣದ ಟ್ರಾವೆಲರ್ ಮಿನಿ ಬಸ್‌ವೊಂದು ಕಳವಾಗಿರುವ ಘಟನೆ ಭಟ್ಕಳದ ಮಣ್ಣುಳಿಯಲ್ಲಿ ನಡೆದಿದೆ.

ಘಟನೆ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳವಾದ ವಾಹನ ಹಾಗೂ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಭಟ್ಕಳ ನಿವಾಸಿ ಕೃಷ್ಣ ತಂದೆ ಅನಂತ ನಾಯ್ಕ (35) ಅವರಿಗೆ ಸೇರಿದ ಕೆಎ-47/7838 ನೋಂದಣಿ ಸಂಖ್ಯೆಯ ಟ್ರಾವೆಲರ್ ಮಿನಿ ಬಸ್‌ನ್ನು ಮಣ್ಣುಳಿ ರಾಷ್ಟ್ರೀಯ ಹೆದ್ದಾರಿ-66ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಸೆ.27ರ ಬೆಳಗ್ಗೆ 11ರಿಂದ ಸೆ.28ರ ಮಧ್ಯಾಹ್ನ 12.30ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ವಾಹನವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಕೃಷ್ಣ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಾಹನ ಕಾಣೆಯಾಗಿರುವುದು ಗಮನಕ್ಕೆ ಬಂದ ಬಳಿಕ ಮಾಲೀಕರು ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಳವಾದ ಮಿನಿ ಬಸ್‌ನ್ನು ಪತ್ತೆಹಚ್ಚಿ, ಕಳ್ಳತನ ಮಾಡಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.