ಕಾರವಾರ: ಆಟೋ ಚಾಲಕರು ಮತ್ತು ಮಾಲಕರ ಪ್ರಮುಖ ಬೇಡಿಕೆಗಳನ್ನು 15 ದಿನಗಳೊಳಗೆ ಈಡೇರಿಸದಿದ್ದರೆ ಸಂಬಂಧಪಟ್ಟ ಜನಪ್ರತಿನಿಧಿಗಳ ವಿರುದ್ಧ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ಉತ್ತರ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕ–ಮಾಲಕರ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಕೆ ನೀಡಿದೆ.

ಮಂಗಳವಾರ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಆಟೋಗಳ ಪರ್ಮಿಟ್ ವ್ಯಾಪ್ತಿಯನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 50 ಕಿ.ಮೀ.ಗೆ ವಿಸ್ತರಿಸಬೇಕು. ಹೊಸ ಆಟೋಗಳಿಗೆ ಪರ್ಮಿಟ್ ನೀಡುವುದನ್ನು ಕನಿಷ್ಠ ಐದು ವರ್ಷ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಕಳೆದ ಫೆಬ್ರವರಿ 12ರಂದು ನಡೆದ ಆರ್‌ಟಿಎ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದ್ದರೂ ಕ್ರಮ ಕೈಗೊಂಡಿಲ್ಲ. ಜುಲೈ 7ರಂದು ಸಿಎನ್‌ಜಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದಾಗ ಜಿಲ್ಲಾಧಿಕಾರಿಗಳು 15 ದಿನಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಭರವಸೆ ಈಡೇರದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದರು.

ಜಿಲ್ಲೆಯಲ್ಲಿ 7 ಸಾವಿರಕ್ಕೂ ಅಧಿಕ ಆಟೋರಿಕ್ಷಾಗಳಿದ್ದು, ಹೆಚ್ಚುತ್ತಿರುವ ವಾಹನಗಳಿಂದ ನಿಲ್ದಾಣಗಳಲ್ಲಿ ಸ್ಥಳಾವಕಾಶದ ಕೊರತೆ ಹಾಗೂ ಚಾಲಕರ ಆದಾಯ ಕುಸಿತ ಉಂಟಾಗಿದೆ. ಎರಡುಕ್ಕಿಂತ ಹೆಚ್ಚು ಪರ್ಮಿಟ್ ಹೊಂದಿರುವವರ ವಿರುದ್ಧ ಕ್ರಮ, ಹೊರಜಿಲ್ಲೆಯ ಆಟೋಗಳಿಗೆ ಹೊಸ ಪರ್ಮಿಟ್ ನೀಡುವ ಪ್ರಕ್ರಿಯೆಗೆ ಕಡಿವಾಣ ಹಾಗೂ ಆಟೋ ನಿಲ್ದಾಣಗಳ ಅಧಿಕೃತ ನೋಂದಣಿಗೆ ಸಂಘ ಒತ್ತಾಯಿಸಿದೆ.

ಸಿಎನ್‌ಜಿ ಪೂರೈಕೆ ಸಮಸ್ಯೆ ಬಗೆಹರಿಸುವುದು, ಸಿಬಿಜಿಗೆ ಸಿಎನ್‌ಜಿ ದರ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪದ ತನಿಖೆ, ವಿಮೆ ಪ್ರೀಮಿಯಂ ಕಡಿತ ಹಾಗೂ ಓಲಾ, ಉಬರ್, ರ್ಯಾಪಿಡೋ ಮತ್ತು ಬಾಡಿಗೆ ಬೈಕ್ ಸೇವೆಗಳ ಹೊಸ ಪರವಾನಿಗೆ ತಡೆಗೂ ಆಗ್ರಹಿಸಲಾಯಿತು.

ಚಾಲಕರ ಕುಟುಂಬಗಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ, ವಿಶೇಷ ಆರೋಗ್ಯ ಕಾರ್ಡ್, 60 ವರ್ಷ ಬಳಿಕ ₹5 ಸಾವಿರ ಪಿಂಚಣಿ, ಕಡಿಮೆ ಬಡ್ಡಿದರದ ಸಾಲ ಹಾಗೂ ಪ್ರತ್ಯೇಕ ಚಾಲಕರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂದು ಮನವಿ ಮಾಡಿದರು. 15 ದಿನಗಳಲ್ಲಿ ಸಭೆ ನಡೆಸಿ ಪರಿಹಾರ ಕಲ್ಪಿಸದಿದ್ದರೆ ಬೃಹತ್ ಪ್ರತಿಭಟನೆ ಹಾಗೂ ಕಾನೂನು ಹೋರಾಟ ನಡೆಸಲಾಗುವುದು ಎಂದು ವಿಶ್ವನಾಥ ಗೌಡ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ, ಗೌರವಾಧ್ಯಕ್ಷ ಆರ್.ಜಿ. ನಾಯ್ಕ, ಉಪಾಧ್ಯಕ್ಷರಾದ ವೆಂಕಟೇಶ ನಾಯ್ಕ, ಶ್ರೀಧರ ನಾಯ್ಕ, ಚಂದ್ರಹಾಸ ನಾಯ್ಕ, ಮಹೇಶ ನಾಯ್ಕ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾನೂನು ಸಲಹೆಗಾರ ಭೈರವ ಡಿ. ನಾಯ್ಕ ಉಪಸ್ಥಿತರಿದ್ದರು.