ಕಾರವಾರ: ಸರ್ಕಾರಿ ಜಾಗವನ್ನು ಅಕ್ರಮವಾಗಿ ಬಳಸಿಕೊಂಡು ವ್ಯಾಪಾರ ನಡೆಸುತ್ತಿದ್ದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫ್ಲೈ ಓವರ್ ಕೆಳಗಿನ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕದ ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ಹೆದ್ದಾರಿ ಫ್ಲೈ ಓವರ್ ಕೆಳಗಿನ ಸರ್ಕಾರಿ ಜಾಗದಲ್ಲಿ ಕಳೆದ ಸುಮಾರು ಎರಡು ವರ್ಷಗಳಿಂದ ನಡೆಸಲಾಗುತ್ತಿದ್ದ ಗಿಡಗಳ ನರ್ಸರಿಗೆ ಬುಧವಾರ ಉಪಲೋಕಾಯುಕ್ತರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ನರ್ಸರಿ ನಡೆಸುತ್ತಿದ್ದ ವ್ಯಾಪಾರಿಯನ್ನು ವಿಚಾರಿಸಿದಾಗ, ಪ್ರತಿದಿನ ಸುಮಾರು ₹3 ಸಾವಿರದಿಂದ ₹4 ಸಾವಿರದಷ್ಟು ವ್ಯಾಪಾರ ನಡೆಯುತ್ತಿರುವುದು ತಿಳಿದುಬಂದಿತು.
ಯಾವುದೇ ಅನುಮತಿ ಪಡೆಯದೆ ಸರ್ಕಾರಿ ಜಾಗದಲ್ಲಿ ನರ್ಸರಿ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕೇವಲ ನೋಟಿಸ್ ನೀಡಿ ದಂಡ ವಸೂಲಿ ಮಾಡುವುದಕ್ಕೆ ಸೀಮಿತವಾಗಿರುವ ಬಗ್ಗೆ ಉಪಲೋಕಾಯುಕ್ತರು ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರಿ ಜಾಗದ ದುರುಪಯೋಗಕ್ಕೆ ಅವಕಾಶ ನೀಡಿರುವುದು ಅಧಿಕಾರಿಗಳ ಕರ್ತವ್ಯಲೋಪವಾಗಿದೆ ಎಂದು ಹೇಳಿದರು.
ಇಂತಹ ಅಕ್ರಮಗಳಿಗೆ ಕೇವಲ ದಂಡ ವಿಧಿಸುವುದರಿಂದ ಕಡಿವಾಣ ಹಾಕಲು ಸಾಧ್ಯವಿಲ್ಲ. ಅಗತ್ಯವಿದ್ದಲ್ಲಿ ಕ್ರಿಮಿನಲ್ ದೂರು ದಾಖಲಿಸಿ, ಅಕ್ರಮವಾಗಿ ಇಡಲಾಗಿರುವ ವಸ್ತುಗಳು ಹಾಗೂ ವಾಹನಗಳನ್ನು ಜಪ್ತಿ ಮಾಡುವಂತಹ ಕ್ರಮ ಕೈಗೊಳ್ಳಬೇಕಿತ್ತು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಖಾಸಗಿ ಕನ್ಸಲ್ಟೆಂಟ್‌ಗಳ ಕಾರ್ಯವೈಖರಿಯನ್ನೂ ಪ್ರಶ್ನಿಸಿದ ಅವರು, ಈ ಅಕ್ರಮಕ್ಕೆ ಅವಕಾಶ ನೀಡಿರುವ ಕುರಿತು ತಕ್ಷಣ ಲಿಖಿತ ಸ್ಪಷ್ಟನೆ ನೀಡುವಂತೆ ಸೂಚಿಸಿದರು.
ಸರ್ಕಾರಿ ಆಸ್ತಿಯ ದುರುಪಯೋಗವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಫ್ಲೈ ಓವರ್ ಕೆಳಗಿನ ಅನಧಿಕೃತ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಪ್ರಕರಣದ ಸಮಗ್ರ ವರದಿಯನ್ನು ನವದೆಹಲಿಯ ಲೋಕಪಾಲ್ ಗಮನಕ್ಕೆ ತರುವುದಾಗಿ ಉಪಲೋಕಾಯುಕ್ತರು ಎಚ್ಚರಿಕೆ ನೀಡಿದರು.

