ಕಾರವಾರ: ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕದ ಅವೈಜ್ಞಾನಿಕ ಹಾಗೂ ಅಸ್ವಚ್ಛ ನಿರ್ವಹಣೆಯನ್ನು ಗಮನಿಸಿದ ಉಪಲೋಕಾಯುಕ್ತರು, ಈ ಕುರಿತು ಸ್ವಯಂಪ್ರೇರಿತವಾಗಿ (ಸುಮೊಟೊ) ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಬುಧವಾರ ಘಟಕಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು, ಕರ್ತವ್ಯ ಲೋಪದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಸಿ-ಒಣ ಕಸ ವಿಲೇವಾರಿಯಲ್ಲಿ ವಿಳಂಬ, ಚರಂಡಿಗಳ ಅಸಮರ್ಪಕ ನಿರ್ವಹಣೆ ಹಾಗೂ 20 ವರ್ಷಗಳಿಂದ ಸಂಗ್ರಹವಾಗಿರುವ ‘ಲೆಗಸಿ ವೇಸ್ಟ್’ ಸಮಸ್ಯೆ ಪರಿಶೀಲನೆ ವೇಳೆ ಕಂಡುಬಂದಿದೆ.

ತ್ಯಾಜ್ಯದಿಂದ ಹೊರಬರುವ ಲೆಚೇಟ್ ಭೂಮಿಗೆ ಇಂಗುತ್ತಿರುವುದರಿಂದ ನೀರಿನ ಮೂಲಗಳು ಕಲುಷಿತಗೊಳ್ಳುವ ಆತಂಕವಿದ್ದು, ಸೊಳ್ಳೆ-ನೊಣಗಳ ಹಾವಳಿ ಹಾಗೂ ನಾಯಿಗಳ ಹಿಂಡು ಸಾರ್ವಜನಿಕರಿಗೆ ಸಮಸ್ಯೆಯಾಗಿರುವುದನ್ನೂ ಗಮನಿಸಲಾಯಿತು.

ಘಟಕದ ವೈಜ್ಞಾನಿಕ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಪಿಡಬ್ಲ್ಯುಡಿ, ಪುರಸಭೆ, ಜಿಪಂ ಸಿಇಒ ಹಾಗೂ ವೈದ್ಯಾಧಿಕಾರಿಗಳನ್ನು ಸಮಿತಿಗೆ ಸೇರ್ಪಡೆಗೊಳಿಸುವಂತೆ ಸೂಚಿಸಲಾಗಿದೆ. ಸಮಿತಿಯು ಪ್ರತಿ ತಿಂಗಳು ಕೈಗೊಂಡ ಕ್ರಮಗಳ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.