ಕಾರವಾರ: ತಾಲೂಕಿನ ಚಿತ್ತಾಕುಲದ ಬಿಡ್ತುಲಭಾಗದಲ್ಲಿ ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿದ್ದ ಚಿರತೆ ಕೂಗಾಟದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಪಂಜರಕ್ಕೆ ಚಿರತೆ ಸೆರೆಯಾಗಿದೆ.
ಬಿಡ್ತುಲಭಾಗದ ಮಾಲ್ಕಿ ಜಾಗದ ಬಳಿಯ ಅರಣ್ಯ ಪ್ರದೇಶದಲ್ಲಿ ಚಿರತೆ ಕೂಗಾಟ ಕೇಳಿಬರುತ್ತಿರುವ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸ್ಥಳದಲ್ಲಿ ಪಂಜರ ಅಳವಡಿಸಿತ್ತು.
ರವಿವಾರ ರಾತ್ರಿ ಪಂಜರಕ್ಕೆ ಚಿರತೆ ಬಿದ್ದಿದ್ದು, ಗ್ರಾಮಸ್ಥರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಸೆರೆಯಾದ ಚಿರತೆಯನ್ನು ಸೂಕ್ತ ಸ್ಥಳಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

