UPI ಶುಲ್ಕದ ಗೊಂದಲ - Online payment ನಿರಾಕರಿಸುತ್ತಿರುವ ವ್ಯಾಪಾರಿಗಳು
ಕಾರವಾರ, ಸೆ.18: ಕೇಂದ್ರ ಸರ್ಕಾರ ಯುಪಿಐ ಬಳಕೆದಾರರ ಮೇಲೆ ಮಾರ್ಚೆಂಟ್ ಶುಲ್ಕ (MDR) ವಿಧಿಸಲು ಮುಂದಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ವ್ಯಾಪಾರ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ.
ಮಹಾನಗರಗಳು ಸೇರುದಂತೆ ವಿವಿಧ ಪ್ರದೇಶಗಳ ಸಣ್ಣ-ಪುಟ್ಟ ಅಂಗಡಿಗಳು, ಹೋಟೆಲ್, ಬೇಕರಿ ಮತ್ತು ತರಕಾರಿ ವ್ಯಾಪಾರಿಗಳು ಈಗಾಗಲೇ ಯುಪಿಐ ಮೂಲಕ ಹಣ ಸಂದಾಯ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. "ಯುಪಿಐಗೆ ಚಾರ್ಜ್ ಬೀಳುತ್ತದೆ ಎಂದು ಕೇಳಿದ್ದೇವೆ, ಅದಕ್ಕೆ ಸ್ಕ್ಯಾನರ್ ತೆಗೆದಿಟ್ಟಿದ್ದೇವೆ" ಎಂದು ಕೆಲ ವ್ಯಾಪಾರಿಗಳು ಹೇಳುತ್ತಿದ್ದಾರೆ.
ಇದರಿಂದ ಸಾಮಾನ್ಯ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ನಗದು ಇಲ್ಲದೆ ಬಂದವರಿಗೆ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಸ್ತವಾಂಶ ಏನು?
ವಾಸ್ತವದಲ್ಲಿ ಕೇಂದ್ರ ಸರ್ಕಾರ ಇನ್ನೂ ಯಾವುದೇ ಶುಲ್ಕವನ್ನು ಜಾರಿಗೊಳಿಸಿಲ್ಲ. ₹1.5 ಕೋಟಿಗಿಂತ ಹೆಚ್ಚು ವಹಿವಾಟು ನಡೆಸುವ ದೊಡ್ಡ ವ್ಯಾಪಾರಿ ಸಂಸ್ಥೆಗಳಿಗೆ ಮಾತ್ರ 0.3% ರಷ್ಟು ಶುಲ್ಕ ವಿಧಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಸಣ್ಣ ವ್ಯಾಪಾರಿಗಳು ಮತ್ತು ಸಾಮಾನ್ಯ ಗ್ರಾಹಕರಿಗೆ ಯುಪಿಐ ಎಂದಿನಂತೆ ಉಚಿತವಾಗಿಯೇ ಇರಲಿದೆ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.
ಆದರೂ ವದಂತಿಗಳಿಂದಾಗಿ ಮಾರುಕಟ್ಟೆಯಲ್ಲಿ ಯುಪಿಐ ಪಾವತಿಗೆ ಅಡಚಣೆಯಾಗುತ್ತಿದ್ದು, ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.
ಪೆಟ್ರೋಲ್ ಪಂಪ್ ಗಳಲ್ಲಿಯೂ UPI payment ನಿರಾಕರಣೆ:
ಯುಪಿಐ ಗೊಂದಲದ ನಡುವೆ ಕೆಲ ಪೆಟ್ರೋಲ್ ಪಂಪಗಳಲ್ಲಿ ಈಗಾಗಲೇ online payment ಸ್ವೀಕರಿಸುತ್ತಿಲ್ಲ. ಗೋವಾ ರಾಜ್ಯದ ಗಡಿಭಾಗದ ಕೆಲ ಪೆಟ್ರೋಲ್ ಪಂಪಗಳಲ್ಲಿ ನಗದು ವ್ಯವಹಾರ ಮಾತ್ರ ನಡೆಯುತ್ತಿದೆ. ನಗದು ಇಲ್ಲವಾಗಿದ್ದಲ್ಲಿ ಗ್ರಾಹಕರನ್ನು ಮರಳಿ ಕಳುಹಿಸಲಾಗುತ್ತಿದೆ.

