Local

ಗ್ರಾಮೀಣ ಸ್ಥಳೀಯ ಸಂಸ್ಥೆ ಅಧಿಕಾರಿ‌ ಮತ್ತು ಸಿಬ್ಬಂದಿಗಳ ಪ್ರತಿಭಟನೆ

ಪ್ರತಿಭಟನೆ

ಕಾರವಾರ
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದಿಂದ ಇಲ್ಲಿನ ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.


ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳು, ಸಿಬ್ಬಂದಿ ವರ್ಗ ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ಮತ್ತು ಇಲಾಖೆಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ಮನವಿಗಳಿಗೂ ಸ್ಪಂದನೆ ಸಿಕ್ಕಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದರು.
ಕೇವಲ ಎಲ್ಲಾ ಸಮಸ್ಯೆಗಳಿಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ನೇರ ಹೊಣೆಗಾರ ಮಾಡುತ್ತಿರುವ ಸರ್ಕಾರದ ಧೋರಣೆಯನ್ನು ಖಂಡನೀಯವಾಗಿದೆ ಎಂದರು.
ರಾಜ್ಯದ ಎಲ್ಲಾ ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತಿಕರಿಸಬೇಕು. ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒ ಅವರನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮವನ್ನು ಕೈಬಿಡಬೇಕು. ವರ್ಗಾವಣೆ ನಿಯಮಗಳಲ್ಲಿ ಯಾವುದೇ ಬದಲಾವಣೆಗೆ ಮುನ್ನ ಸಂಘದ ಸಲಹೆಯನ್ನು ಪಡೆಯಬೇಕು. ಪಿಡಿಒ ಜೇಷ್ಠತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ, ಬಡ್ತಿ ನೀಡಲು ಕ್ರಮಕೈಗೊಳ್ಳಬೇಕು. ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಯ ಅನುಷ್ಠಾನ ಪಡಿಸುವ ಬಗ್ಗೆ ಗುರಿ ನಿಗದಿಯನ್ನು ಕೈಬಿಡಬೇಕು. ಕುಂದು ಕೊರತೆ ಪ್ರಾಧಿಕಾರವನ್ನು ಪೊಲೀಸ್ ಇಲಾಖೆ ಸದೃಢಗೊಳಿಸಬೇಕು. ಗ್ರಾಪಂ ಮೇಲ್ಮರ್ಜೇಗೇರಿಸಿದ ಸಂದರ್ಭದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಅಲ್ಲಿನ ಸರ್ಕಾರಿ ನೌಕರರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ವಿಲೀನಗೊಳ್ಳಿಸಬೇಕು. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಇತರೆ ಇಲಾಖೆಯಲ್ಲಿರುವ ಸಮಾನಾಂತರ ಹುದ್ದೆಗಳಿಗೆ ನಿಯೋಜನೆ ಮೇಲೆ ಹೋಗಲು ಒಟ್ಟು ಮಂಜೂರಾದ ಹುದ್ದೆಗಳಲ್ಲಿ ಶೇ. ೨೫ ಹುದ್ದೆಗಳಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿಯ ಪಂಚ ನೌಕರುಗಳಿಗೆ ವೇತನ ಶ್ರೇಣಿ ಮತ್ತು ಸೇವಾ ಹಿರಿತನದ ವೇತನವನ್ನು ಜಾರಿ ಮಾಡಿ ಕಾರ್ಮಿಕ ಇಲಾಖೆಯ ವೇತನವನ್ನು ಹೊರತುಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದಾನೆ ವೇತನ ನಿಗದಿಪಡಿಸಿ ನೌಕರರ ಖಾತೆಗಳಿಗೆ ಸಂಬಳವನ್ನು ಪಾವತಿ ಮಾಡಬೇಕು. ಇ.ಎಸ್.ಐ. ಮತ್ತು ಪಿ.ಎಫ್ ಜಾರಿಗೆಗೊಳಿಸಬೇಕು. ಗ್ರಾಪಂ ಸಿಬ್ಬಂದಿಗಳ ಆರೋಗ್ಯ ವಿಮೆಯನ್ನು ೫ ಲಕ್ಷ ಮಾಡಬೇಕು. ಕರವಸೂಲಿಗಾರ ಮತ್ತು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದಿAದ ಕಾರ್ಯದರ್ಶಿ ಗ್ರೇಡ್ -೨ ಮತ್ತು ಎಸ್.ಡಿ.ಎ.ಎ. ಹುದ್ದೆಗಳಿಗೆ ಸರ್ಕಾರದಿಂದ ಸೇವೆ ಒಳಗಿನ ನೇರ ನೇಮಕಾತಿ ಎಂದು ಮಾಡುತ್ತಿದ್ದು ನೇರ ನೇಮಕಾತಿ ಎಂಬ ಪದವನ್ನು ಕೈ ಬಿಟ್ಟು ಮುಂಬಡ್ತಿ ಎಂಬ ಪದವನ್ನು ಸೇರಿಸಿ ಸರ್ಕಾರದ ಆದೇಶ ಮಾಡಬೇಕು. ಪಂಚ ನೌಕರುಗಳಿಗೆ ನಿವೃತ್ತಿ ಉಪಧನವನ್ನು ೬೦ ತಿಂಗಳ ವೇತನದ ಮೊತ್ತವಾಗಿ ಉಪಧನವನ್ನು ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಗೌರವಧನವನ್ನು ಕೇರಳ ರಾಜ್ಯದಲ್ಲಿರುವಂತೆ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ೧೫,೦೦ ರೂ. ಉಪಾಧ್ಯಕ್ಷರಿಗೆ ೧೨,೦೦೦ ರೂ ಹಾಗೂ ಸದಸ್ಯರಿಗೆ ೧೦,೦೦೦ ರೂ.ಗೆ ಹೆಚ್ಚಿಸಬೇಕು. ಪಿಂಚಣಿ ನೀಡುವ ವ್ಯವಸ್ಥೆ ಜಾರಿಗೊಳಿಸ ಬೇಕು. ಉಪವೇಶನ ಶುಲ್ಕವನ್ನು ೫೦೦ ರೂ.ಗೆ ಹೆಚ್ಚಿಸಬೇಕು. ಸದಸ್ಯರಿಗೆ ಜನರ ಕೆಲಸಗಳಿಗಾಗಿ ಓಡಾಡಲು ಉಚಿತ ಬಸ್ ಪಾಸ್, ಆರೋಗ್ಯ ವಿಮೆ ಜಾರಿಗೆ ಮಾಡಬೇಕು. ಮೇಲಿನ ಹಂತದ ಅಧಿಕಾರಿಗಳು ಗ್ರಾಮ ಪಂಚಾಯತಿಗಳನ್ನು ತಮ್ಮ ಕೈಗೆಳಗಿನ ಶಾಖಾ ಕಛೇರಿಗಳಂತೆ ನಡೆಸಿಕೊಳ್ಳುವುದನ್ನು ನಿಲ್ಲಿಸಬೇಕು. ಗ್ರಾಪಂ ನಿರ್ವಹಣೆ ಮಾಡುವ ಬೀದಿ ದೀಪಗಳು ಹಾಗೂ ಕುಡಿಯುವ ನೀರು ಸರಬರಾಜು ಘಟಕಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳು ಮೀಟರ್ ಆಳವಡಿಸದೆ, (ಎನರ್ಜಿ ಆಡಿಟಿಂಗ್ ಮಾಡದೆ) ಸರಾಸರಿ ಆಧಾರದ ಮೇಲೆ ವಿದ್ಯುತ್ ಬಿಲ್ ನೀಡುತ್ತಿದ್ದು, ಸರಿಯಾದ ಲೆಕ್ಕವಿಲ್ಲದೆ ವಿದ್ಯುತ್ ಬಿಲ್ ಕಟ್ಟಲಾಗುತ್ತಿದೆ. ಅಲ್ಲದೆ ದಿನಾಂಕ ೩೧-೦೩-೨೦೧೫ ವರಗೆ ರಾಜ್ಯ ಸರ್ಕಾರ ಗ್ರಾಪಂಗಳ ವಿದ್ಯುತ್ ಬಿಲ್ ಬಾಕಿಯನ್ನು ಪಂಚಾಯತಿಗಳ ಪರವಾಗಿ ಕಟ್ಟಿರುವುದಾಗಿ ತಿಳಿಸಿದ್ದು, ವಿದ್ಯುತ್ ಕಂಪನಿಗಳು ಹಳೆಯ ಬಾಕಿಯನ್ನು ಬಿಲ್ ಗಳಲ್ಲಿ ತೋರಿಸುತ್ತಲೇ ಬರುತ್ತಿವೆ. ಕೂಡಲೆ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!