ನೌಕಾನೆಲೆ ವ್ಯಾಪ್ತಿ ಪ್ರದೇಶದಲ್ಲಿ ಹಾರಿದ ಅನುಮಾನಾಸ್ಪದ ಡ್ರೋನ್
ನೌಕಾನೆಲೆ ವ್ಯಾಪ್ತಿ ಪ್ರದೇಶದಲ್ಲಿ ಹಾರಿದ ಅನುಮಾನಾಸ್ಪದ ಡ್ರೋನ್
ಕಾರವಾರ:
ಕಾರವಾರದ ಅರಗಾದಲ್ಲಿರುವ ಸೀಬರ್ಡ್ ನೌಕಾನೆಲೆ ಯೋಜನಾ ಪ್ರದೇಶ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ಡ್ರೋನ್ ಹಾರಿಸಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗಾ ಸೀಬರ್ಡ್ ನೌಕಾನೆಲೆ ಯೋಜನೆ ಸಮೀಪದಿಂದ ರಾತ್ರಿ ವೇಳೆ ಅಪರಿಚಿತ ಡ್ರೋನ್ ಹಾರಿರುವುದು ಅನುಮಾನ ಮೂಡಿಸುವಂತೆ ಮಾಡಿದೆ.ಕಳೆದ ಮೂರು ದಿನಗಳ ಹಿಂದೆ ತಾಲೂಕಿನ ಅರಗಾದ ವಕ್ಕನಳ್ಳಿ ಭಾಗದಲ್ಲಿ ರಾತ್ರಿವೇಳೆಯಲ್ಲಿ ಡ್ರೋನ್ ಹಾರಿರುವ ಬಗ್ಗೆ ಮಾಹಿತಿ ಇದ್ದು, ವಕ್ಕನಳ್ಳಿ ಭಾಗದಿಂದ ಐಎನ್ಎಸ್ ಪತಂಜಲಿ ಆಸ್ಪತ್ರೆ ಹಿಂಬದಿಯಿಂದ ಬಿಣಗಾ ಚತುಷ್ಪಥ ಹೆದ್ದಾರಿಯ ಸುರಂಗ ಮಾರ್ಗದವರೆಗೂ ಡ್ರೋನ್ ಹಾರಿಸಲಾಗಿದೆ.ಬೈಕ್ ಅಥವಾ ಸನ್ ರೂಫ್ ಕಾರ್ ಮೂಲಕ ತೆರಳುತ್ತಾ ಈ ಡ್ರೋನ್ ಆಪರೇಟ್ ಮಾಡಿರುವ ಸಂಶಯ ವ್ಯಕ್ತವಾಗಿದೆ.
ಸೀಬರ್ಡ್ ಯೋಜನಾ ಪ್ರದೇಶದ ವ್ಯಾಪ್ತಿಯುದ್ದಕ್ಕೂ ಸುರಕ್ಷಿತಾ ದೃಷ್ಠಿಯಿಂದ ಡ್ರೋನ್ ಬಳಕೆ ಮಾಡದಂತೆ ರಕ್ಷಣಾ ಇಲಾಖೆ ಕಟ್ಟುನಿಟ್ಟಿನ ಅದೇಶ ಮಾಡಿದ್ದು, ಇದರ ಹೊರತಾಗಿಯೂ ಡ್ರೋನ್ ಹಾರಿರುವುದರಿಂದ ಗುಪ್ತಚರ ಸಂಸ್ಥೆಗಳು ಹುಡುಕಾಟ ನಡೆಸುತ್ತಿವೆ. ರಾತ್ರಿ ವೇಳೆ ಈ ಡ್ರೋನ್ ಯಾವ ಕಾರಣಕ್ಕೆ ಹಾರಿಸಲಾಗಿದೆ? ಇನ್ನೂ ಕೂಡಾ ನಿಗೂಢವಾಗಿದೆ. ಇದು ಸಾಮಾನ್ಯ ಡ್ರೋನ್ ಆಗಿರದೆ ನೈಟ್ ವಿಶನ್ ಡ್ರೋನ್ ಬಳಕೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. 600 ಮೀ. ಅಥವಾ 1,200 ಮೀ. ದೂರದವರೆಗೆ ಹಾರಾಡುವ ಸಾಮರ್ಥ್ಯದ ಡ್ರೋನ್ ಸ್ಥಳೀಯವಾಗಿ ಬಳಕೆಯಾಗೋದು ಸಾಮಾನ್ಯ. ಆದರೆ, ಈ ಡ್ರೋನ್ ಸುಮಾರು 3 ಕಿ.ಮೀ.ಗೂ ಹೆಚ್ಚು ದೂರ ಹಾರಿರುವ ಸಂಶಯವಿದೆ.
ಈ ಬಗ್ಗೆ ನಿಖರ ಮಾಹಿತಿ ಕಲೆ ಹಾಕಲು ರಾಜ್ಯ ಗುಪ್ತಚರ ಇಲಾಖೆಗಳು ಹಾಗು ನೌಕಾಪಡೆಯ ಕೇಂದ್ರ ಗುಪ್ತಚರ ಇಲಾಖೆಗಳು ಮುಂದಾಗಿದ್ದು, ಸ್ಥಳೀಯರಿಂದಲೂ ಮಾಹಿತಿ ಪಡೆಯುವ ಮೂಲಕ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಅರಣ್ಯ ಇಲಾಖೆ, ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಹಾಗೂ NHAI ಕೂಡಾ ಡ್ರೋನ್ ಬಳಸಿಲ್ಲ ಎಂದು ಸ್ಪಷ್ಟಪಡಿಸಿವೆ.