ಪಾಲಕರೇ ಎಚ್ಚರ; ಬಲೂನ್‌ನೊಂದಿಗೆ ಆಟವಾಡುತ್ತಿದ್ದ ಬಾಲಕ ಸಾವು!
ಪಾಲಕರೇ ಎಚ್ಚರ; ಬಲೂನ್‌ನೊಂದಿಗೆ ಆಟವಾಡುತ್ತಿದ್ದ ಬಾಲಕ ಸಾವು!
ಹಳಿಯಾಳ: ಮಕ್ಕಳು ಆಟವಾಡುವಾಗ ಯಾವ ವಸ್ತುಗಳೊಂದಿಗೆ ಆಡುತ್ತಿದ್ದಾರೆ, ಏನ್ನೆಲ್ಲಾ ಮಾಡುತ್ತಿದ್ದಾರೆ ಎನ್ನುವುದನ್ನು ಪೋಷಕರು ಗಮನಿಸುತ್ತಿರಬೇಕು. ಇಲ್ಲವಾದಲ್ಲಿ ಆಟದ ಮೋಜು ಪ್ರಾಣಕ್ಕೇ ಕಂಟಕವಾಗಬಹುದು ಎನ್ನುವುದು ಊಹಿಸಲೂ ಸಾಧ್ಯವಿಲ್ಲ. ಇದಕ್ಕೆ ನಿದರ್ಶನ ಎನ್ನುವಂತಹ ಘಟನೆಯೊಂದು ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.
ತಾಲ್ಲೂಕಿನ ಜೋಗಿನಕೊಪ್ಪ ಗ್ರಾಮದ 7ನೇ ತರಗತಿ ವಿದ್ಯಾರ್ಥಿ ನವೀನ ನಾರಾಯಣ ಬೆಳಗಾಂವಕರ(13) ಬಲೂನ್ ಊದುತ್ತಿದ್ದ ವೇಳೆ ಕೈತಪ್ಪಿ ನುಂಗಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.
ಬಾಲಕ ನವೀನ್ ಕೈಯಲ್ಲಿ ಬಲೂನು ಹಿಡಿದು ಊದುತ್ತಿದ್ದ. ಈ ವೇಳೆ ಉಸಿರು ಒಳತೆಗೆದುಕೊಳ್ಳುವಾಗ ಬಲೂನು ಕೈತಪ್ಪಿ ಬಾಲಕನ ಗಂಟಲಿಗೆ ಹೋಗಿದೆ. ಪರಿಣಾಮ ಉಸಿರಾಡಲು ಸಾಧ್ಯವಾಗದೇ ಬಾಲಕ ಒದ್ದಾಡಿದ್ದು ಇದನ್ನು ಗಮನಿಸಿದ ಮನೆಯವರು ಕೂಡಲೇ ಬಾಲಕನನ್ನು ಕರೆದುಕೊಂಡು ಹಳಿಯಾಳ ತಾಲ್ಲೂಕಾಸ್ಪತ್ರೆಗೆ ದೌಡಾಯಿಸಿದ್ದಾರೆ.
ಈ ವೇಳೆ ಬಾಲಕನನ್ನು ಪರೀಕ್ಷಿಸಿದ ವೈದ್ಯರು ಬಾಲಕನ ಗಂಟಲಲ್ಲಿ ಸಿಲುಕಿದ್ದ ಬಲೂನ್ ಹೊರತೆಗೆದಿದ್ದಾರೆ. ಆದರೆ ಈ ವೇಳೆಗಾಗಲೇ ಬಾಲಕ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.