ಕಾರವಾರದಲ್ಲಿ ಟ್ರ್ಯಾಕರ್ ಹೊಂದಿದ್ದ ರಣಹದ್ದು ಪ್ರತ್ಯಕ್ಷ: ಗೂಢಾಚಾರಿಕೆ ಆತಂಕ!
ಕಾರವಾರದಲ್ಲಿ ಟ್ರ್ಯಾಕರ್ ಹೊಂದಿದ್ದ ರಣಹದ್ದು ಪ್ರತ್ಯಕ್ಷ: ಗೂಢಾಚಾರಿಕೆ ಆತಂಕ!
*ಕಾರವಾರದಲ್ಲಿ ಟ್ರ್ಯಾಕರ್ ಹೊಂದಿದ್ದ ರಣಹದ್ದು ಪ್ರತ್ಯಕ್ಷ: ಗೂಢಾಚಾರಿಕೆ ಆತಂಕ!*
ಕಾರವಾರ: ನಗರದ ಕೋಡಿಭಾಗ್ ನದಿವಾಡದಲ್ಲಿ ರಣಹದ್ದೊಂದು ಪ್ರತ್ಯಕ್ಷವಾಗಿದ್ದು, ಕಾಲಿನಲ್ಲಿ ಟ್ಯಾಗ್ ಹಾಗೂ ಬೆನ್ನ ಮೇಲೆ ಟ್ರ್ಯಾಕರ್ ರೀತಿಯ ಯಂತ್ರ ಅಳವಡಿಸಿರುವುದು ಕಂಡುಬಂದಿದೆ. ನೌಕಾನೆಲೆ ಪ್ರದೇಶವಿರುವ ಕಾರವಾರ ವ್ಯಾಪ್ತಿಯಲ್ಲಿ ಈ ರೀತಿಯ ರಣಹದ್ದು ಕಾಣಿಸಿರುವುದು ಗೂಢಾಚಾರಿಕೆಯ ಆತಂಕ ಸೃಷ್ಟಿಯಾಗಿದೆ.
ಭಾನುವಾರ ಬೆಳಿಗ್ಗೆ ನಗರದ ನದಿವಾಡದಲ್ಲಿ ಜನವಸತಿ ಪ್ರದೇಶದ ಬಳಿ ರಣಹದ್ದು ಕಾಣಿಸಿಕೊಂಡಿತ್ತು. ಈ ಭಾಗದಲ್ಲಿ ರಣಹದ್ದು ಕಾಣಸಿಗುವುದು ಅಪರೂಪವಾಗಿದ್ದು ಸ್ಥಳೀಯರು ಕುತೂಹಲದಿಂದ ರಣಹದ್ದನ್ನು ವೀಕ್ಷಣೆ ಮಾಡಲು ಮುಗಿಬಿದ್ದಿದ್ದರು. ಆದರೆ ಈ ವೇಳೆ ರಣಹದ್ದಿನ ಎರಡೂ ಕಾಲುಗಳಲ್ಲಿ ಇಂಗ್ಲೀಷ್ ಅಕ್ಷರದಲ್ಲಿ ಏನನ್ನೋ ಬರೆದಿರುವ ಟ್ಯಾಗ್ ರೀತಿಯ ವಸ್ತುವಿದ್ದು, ಬೆನ್ನಿನ ಮೇಲೆ ಜಿಪಿಎಸ್ ಯಂತ್ರ ಅಥವಾ ಕ್ಯಾಮೆರಾ ರೀತಿ ಕಾಣುವ ವಸ್ತು ಅಳವಡಿಸಿರುವುದು ಗಮನಕ್ಕೆ ಬಂದಿದೆ.
ದೇಶದ ಪ್ರತಿಷ್ಠಿತ, ರಕ್ಷಣಾ ಇಲಾಖೆಯ ನೌಕಾನೆಲೆ ಇರುವ ಪ್ರದೇಶವಾಗಿರುವ ಕಾರವಾರದಲ್ಲಿ ಈ ರೀತಿಯ ರಣಹದ್ದು ಕಾಣಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯ ನಿವಾಸಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ರಣಹದ್ದನ್ನು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ಕೈಗಾ ಅಣು ವಿದ್ಯುತ್ ಕೇಂದ್ರ, ಕದಂಬ ನೌಕಾನೆಲೆ ಇರುವ ಕಾರವಾರದಲ್ಲಿ ಎಲೆಕ್ಟ್ರಾನಿಕ್ ಚಿಪ್ ಇರುವ ಪಕ್ಷಿ ಕಾಣಿಸಿಕೊಂಡಿರುವುದು ದೇಶದ ಸುರಕ್ಷತೆಗೆ ಸವಾಲಾದಂತಾಗಿದೆ. ಈ ಪಕ್ಷಿ ಎಲ್ಲಿಂದ ಬಂದರಬಹುದು? ಚಿಪ್ ಮತ್ತು ಟ್ಯಾಗ್ ಇರಲು ಕಾರಣವೇನು? ಕಾರವಾರದಲ್ಲಿ ಈ ಪಕ್ಷಿ ಹೇಗೆ ಬಂತು ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ. ಈ ಕುರಿತು ಜಿಲ್ಲಾಡಳಿತ ಗಮನ ಹರಿಸಬೇಕು. ಹಾಗೂ ಈ ಪಕ್ಷಿಯನ್ನು ಸೆರೆ ಹಿಡಿದು ಚಿಪ್ ಮತ್ತು ಟ್ಯಾಗ್ ಬಗ್ಗೆ ಮಾಹಿತಿ ಕಲೆಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.