ದಾರಿಯಲ್ಲಿ ಸಿಕ್ಕ ಮಾಂಗಲ್ಯ ಸರ ಮರಳಿಸಿ ಮಾನವೀಯತೆ ಮೆರೆದ ಮಹಿಳೆ
ದಾರಿಯಲ್ಲಿ ಸಿಕ್ಕ ಮಾಂಗಲ್ಯ ಸರ ಮರಳಿಸಿ ಮಾನವೀಯತೆ ಮೆರೆದ ಮಹಿಳೆ
ಕುಮಟಾ: ರಸ್ತೆಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ಮಾಲೀಕರಿಗೆ ಮರಳಿಸುವ ಮೂಲಕ ಮಹಿಳೆಯೋರ್ವರು ಮಾನವೀಯತೆ ಮೆರೆದ ಘಟನೆ ಕುಮಟಾದಲ್ಲಿ ನಡೆದಿದೆ. ಸರ್ವೇಶ್ವರಿ ಶ್ರೀಧರ ನಾಯ್ಕ ಮಾಂಗಲ್ಯ ಸರ ಮರಳಿಸಿದ ಮಹಿಳೆಯಾಗಿದ್ದಾರೆ.
ಸೋಮವಾರ ಸಂಜೆ ವೇಳೆಗೆ ಕಲಭಾಗ್ ಶಾಲೆಯ ಶಿಕ್ಷಕಿ ಸುಧಾ ದೇವಣ್ಣ ನಾಯ್ಕ ಕುಮಟಾ ಪಟ್ಟಣದಿಂದ ತೆರಳುವ ವೇಳೆ ತಮ್ಮ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು. ಸುಮಾರು 70 ಸಾವಿರ ಬೆಲೆಬಾಳುವ ಚಿನ್ನದ ಮಾಂಗಲ್ಯ ಸರವನ್ನು ಶಿಕ್ಷಕಿ ಕಳೆದುಕೊಂಡಿದ್ದು, ಸಾಕಷ್ಟು ಹುಡುಕಾಟ ನಡೆಸಿದರೂ ಮಾಂಗಲ್ಯ ಸಿಕ್ಕಿರಲಿಲ್ಲ.
ಅದೇ ದಿನ ಸಂಜೆ ನೆಲ್ಲಿಕೇರಿ ಮಾರ್ಗವಾಗಿ ಕುಮಟಾ ಪಟ್ಟಣದ ನಿರ್ಮಲಾ ಬುಕ್ ಸ್ಟಾಲ್ ಬಳಿ ಆಗಮಿಸುತ್ತಿದ್ದ ನಿವೃತ್ತ ASI ಶ್ರೀಧರ ನಾಯ್ಕ ಪತ್ನಿ ಸರ್ವೇಶ್ವರಿ ನಾಯ್ಕ ಅವರಿಗೆ ಮಾಂಗಲ್ಯ ಸರ ಸಿಕ್ಕಿತ್ತು. ಕೂಡಲೇ ಅವರು ಪೊಲೀಸ್ ಠಾಣೆಗೆ ತೆರಳಿ ಸಿಪಿಐ ಯೋಗೇಶ.ಕೆ.ಎಂ ಅವರಿಗೆ ಮಾಂಗಲ್ಯ ಸರವನ್ನು ಹಸ್ತಾಂತರಿಸಿ ಮಾಲೀಕರನ್ನು ಹುಡುಕಿ ತಲುಪಿಸುವಂತೆ ಮನವಿ ಮಾಡಿದ್ದರು.
ಬಳಿಕ ಮಾಂಗಲ್ಯ ಕಳೆದುಕೊಂಡ ಶಿಕ್ಷಕಿ ಸುಧಾ ಅವರನ್ನು ಪತ್ತೆ ಹಚ್ಚಿದ ಪೊಲೀಸರು ಮಾಂಗಲ್ಯ ಸಿಕ್ಕ ಮಾಹಿತಿ ನೀಡಿದ್ದರು. ಅದರಂತೆ ಮಂಗಳವಾರ ಕುಮಟಾ ಪೊಲೀಸ್ ಠಾಣೆಯಲ್ಲಿ ಸಿಪಿಐ ಯೋಗೇಶ ಕೆ.ಎಂ ಸಮ್ಮುಖದಲ್ಲಿ ಮಾಂಗಲ್ಯ ಸಿಕ್ಕಿದ್ದ ಸರ್ವೇಶ್ವರಿ ಅವರ ಕೈಯ್ಯಿಂದಲೇ ಶಿಕ್ಷಕಿ ಸುಧಾ ಅವರಿಗೆ ಸರವನ್ನು ಹಸ್ತಾಂತರಿಸಲಾಯಿತು.