ಕರಡಿ ದಾಳಿಯಲ್ಲಿ ಗಾಯಗೊಂಡ ವೃದ್ಧ ಕುಟುಂಬಕ್ಕೆ ಪರಿಹಾರ ನೀಡಿ; ಕುಣಬಿ ಸಮಾಜದ ಬೇಡಿಕೆ
ಕರಡಿ ದಾಳಿಯಲ್ಲಿ ಗಾಯಗೊಂಡ ವೃದ್ಧ ಕುಟುಂಬಕ್ಕೆ ಪರಿಹಾರ ನೀಡಿ; ಕುಣಬಿ ಸಮಾಜದ ಬೇಡಿಕೆ
ಜೊಯಿಡಾ: ತಾಲೂಕಿನ ಕಾಳಿ ಹುಲಿ ಯೋಜನೆ ವ್ಯಾಪ್ತಿಗೆ ಬರುವ ಲಾಂಡೇ ಗ್ರಾಮದ ರೈತ ಅರ್ಜುನ್ ಪುನೊ ವೇಳಿಪ ಮೇಲೆ ಕರಡಿ ದಾಳಿ ಮಾಡಿದೆ. ಇವರ ಸಂಪೂರ್ಣ ಖರ್ಚಿನ ಜವಾಬ್ದಾರಿ ಅರಣ್ಯ ಇಲಾಖೆ ವಹಿಸಬೇಕು. ಕುಟುಂಬಕ್ಕೆ ಪರಿಹಾರ ನೀಡಿ, ದತ್ತಕ ಪಡೆದು ಇಲಾಖೆಯಲ್ಲಿ ಉದ್ಯೋಗ ನೀಡಿ ಭದ್ರತೆ ನೀಡುವಂತೆ ಕುಣಬಿ ಸಮಾಜದಿಂದ ಅಣಶಿ ಎಸಿಎಫ್ ಮೂಲಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆನರಾವೃತ್ತ ಶಿರಸಿರವರಿಗೆ ಮನವಿ ನೀಡಲಾಗಿದೆ.
ಅಣಶಿ ವನ್ಯ ಜೀವಿ ವಲಯದ ಲಾಂಡೆ ಗ್ರಾಮದ ಬುಡಕಟ್ಟು ಕುಣಬಿ ಜನಾಂಗಕ್ಕೆ ಸೇರಿದ ರೈತ ಅರ್ಜುನ್ ಪುನೊ ವೇಳಿಪ ಮೇಲೆ ಕರಡಿ ದಾಳಿ ಮಾಡಿದೆ. ಇವರ ಕಣ್ಣು ತೆಗೆದಿದೆ, ತಲೆ, ಹೊಟ್ಟೆ , ಮುಖ ಭಾಗಕ್ಕೆ ಗಾಯಮಾಡಿದೆ. ಮರ್ಮಾಂಗಕ್ಕೆ ಕಚ್ಚಿ ಗಾಯಮಾಡಿದೆ. ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದರು ಚಿಕಿತ್ಸೆ ಫಲಕಾರಿಯಾಗುತ್ತಿಲ್ಲ. ಆದ್ದರಿಂದ ಕರಡಿ ದಾಳಿಯಲ್ಲಿ ಗಾಯಗೊಂಡಿರುವ ವೃದ್ಧ ಅರ್ಜುನ್ ರವರಿಗೆ ಚಿಕಿತ್ಸೆಯ ಸಂಪೂರ್ಣ ವೆಚ್ಚ ಅರಣ್ಯ ಇಲಾಖೆಯಿಂದ ಭರಿಸಬೇಕು. ಹಾಗು ಅವರಿಗೆ ಪರಿಹಾರ ನೀಡಬೇಕು. ಎಲ್ಲ ಬೇಡಿಕೆಗಳಿಗೆ ಅರಣ್ಯ ಇಲಾಖೆ ಸ್ಪಂದಿಸದೇ ಇದ್ದಲ್ಲಿ ಇಲಾಖೆ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಬೇಕಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಡಿ.ಎಪ್.ಓ ದಾಂಡೇಲಿ, ಎಸಿಎಫ್ ಅಣಶಿ, ವಲಯ ಅರಣ್ಯಾಧಿಕಾರಿ ಅಣಶಿ ಗೆ ಮನವಿ ನೀಡಲಾಗಿದೆ.
ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ್ ಗಾವಡಾ, ತಾಲೂಕು ಅಧ್ಯಕ್ಷ ಪ್ರೇಮಾನಂದ ವೇಳಿಪ, ಸಂಸ್ಥಾಪಕ ಅಧ್ಯಕ್ಷ ಮಾಬಳು ಕುಂಡಲಕರ, ಕಾರ್ಯದರ್ಶಿ ದಯಾನಂದ ಕುಮಗಾಳಕರ, ಖಜಾಂಚಿ ದಿವಾಕರ ಕುಂಡಲಕರ, ಭಾಲಚಂದ್ರ ಮಿರಾಶಿ, ಚಂದ್ರಕಾಂತ ಲಾಂಡೇಕರ, ಬುಧೊ ಕಾಲೇಕರ, ವಿಷ್ಣು ವೇಳಿಪ, ಧವಲ ಗಾವಡಾ, ಸಂದೇಶ, ಮಾದೇವ ಗಾವಡಾ, ಯುವರಾಜ್ ಮಿರಾಶಿ, ದತ್ತಾ ಬಿಲೇಕರ, ರವಿದಾಸ ವೇಳಿಪ, ಬಾಬುರಾವ್ ವೇಳಿಪ ಮುಂತಾದವರು ಉಪಸ್ಥಿತರಿದ್ದರು.