ಕುಮಟಾ: ಸರ್ಕಾರ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾದಲ್ಲಿ ಗ್ರಾಮೀಣ ಭಾಗದಲ್ಲೂ ಪೊಲೀಸ್ ನೆರವು ತುರ್ತಾಗಿ ಸಿಗಬೇಕು ಎನ್ನುವ ಉದ್ದೇಶದಿಂದ 112 ERSS ಹೆದ್ದಾರಿ ಗಸ್ತು ಪೊಲೀಸ್ ಸೇವೆಯನ್ನು ಆರಂಭಿಸಿತ್ತು. ಈ ಸೇವೆ ಕೇವಲ ಅಪರಾಧಗಳು ನಡೆದಾಗ ಮಾತ್ರವಲ್ಲ, ಸಾರ್ವಜನಿಕರ ಸಮಸ್ಯೆಗಳಿಗೂ ಪೊಲೀಸರು ನೆರವಾಗುತ್ತಾರೆ ಎನ್ನುವುದನ್ನು ಕುಮಟಾದ ಹೆದ್ದಾರಿ ಗಸ್ತು ಪೊಲೀಸರು ತೋರಿಸಿಕೊಟ್ಟಿದ್ದಾರೆ.
ಬುಧವಾರ ಸಂಜೆ ವೇಳೆಗೆ ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಸಿ-ಕುಮಟಾ ರಸ್ತೆಯ ಅಂತ್ರವಳ್ಳಿ ಬಳಿ ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಒಂದು ಪಂಚರ್ ಆಗಿ ನಿಂತಿತ್ತು. ಬಸ್ನ ಚಾಲಕ ಒಬ್ಬನೇ ಇದ್ದು ಸ್ಟೆಪ್ನಿ ಬದಲಿಸಲಾಗದೇ ವಿದ್ಯಾರ್ಥಿಗಳು ಮಾರ್ಗ ಮದ್ಯೆ ಕಾಲ ಕಳೆಯುವಂತಾಗಿತ್ತು.
ಈ ವೇಳೆ ಅಂತ್ರವಳ್ಳಿ ಮಾರ್ಗವಾಗಿ ಆಗಮಿಸಿದ 112 ಹೆದ್ದಾರಿ ಗಸ್ತು ಪೊಲೀಸರು ಶಾಲಾ ಬಸ್ ನಿಂತಿದ್ದನ್ನು ಗಮನಿಸಿ ವಿಚಾರಿಸಿದ್ದಾರೆ. ಬಸ್ ಚಾಲಕ ಅಹಾಯಕತೆ ತೋಡಿಕೊಂಡ ಹಿನ್ನಲೆ ಸಹಾಯಕ್ಕೆ ಮುಂದಾದ ಪೊಲೀಸರು ತಾವೇ ಸ್ಟೆಪ್ನಿ ಟಯರನ್ನು ತೆಗೆದು ಪಂಚರ್ ಆಗಿದ್ದ ಟಯರನ್ನು ಬದಲಿಸಿ ಕೊಟ್ಟಿದ್ದಾರೆ. ಬಸ್ ಸರಿಯಾದ ಬಳಿಕ ವಿದ್ಯಾರ್ಥಿಗಳು ಸಂತಸಗೊಂಡಿದ್ದು ಪೊಲೀಸರಿಗೆ ಧನ್ಯವಾದ ತಿಳಿಸಿ ತೆರಳಿದ್ದಾರೆ. ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.