ಬೆಂಗಳೂರು : ಅಂಕೋಲಾದ ಬೇಲೆಕೇರಿ ಅದಿರು ಅಕ್ರಮ ಸಾಗಾಟ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಿದೆ.
ಒಟ್ಟು ನಾಲ್ಕು ಪ್ರಕರಣದಲ್ಲಿ ಶಿಕ್ಷೆ ಪ್ರಕಟಿಸಿದೆ. ಒಂದು ಪ್ರಕರಣದಲ್ಲಿ 7 ವರ್ಷ, ಮತ್ತೊಂದು ಪ್ರಕರಣದಲ್ಲಿ 5 ಹಾಗೂ ಇನ್ನೊಂದು ಪ್ರಕರಣದಲ್ಲಿ 3 ವರ್ಷ ಶಿಕ್ಷೆ ವಿಧಿಸಿ ಅದೇಶಿಸಿದೆ.
ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪನ್ನು ಪ್ರಕಟ ಮಾಡಿದೆ. ನ್ಯಾಯಮೂರ್ತಿ ಗಜಾನನ ಭಟ್ ಅವರು ಈ ಮಹತ್ವದ ತೀರ್ಪನ್ನು ನೀಡಿದ್ದಾರೆ. ಜೊತೆಗೆ 9 ಕೋಟಿ 60 ಲಕ್ಷ ರೂಪಾಯಿ ದಂಡವನ್ನು ಪಾವತಿ ಮಾಡುವಂತೆ ಆದೇಶ ಮಾಡಿದೆ. 420 ವಂಚನೆ ಪ್ರಕರಣದಲ್ಲಿ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಅದಿರು ಕಳ್ಳತನ ಪ್ರಕರಣದಲ್ಲಿ ಮೂರು ವರ್ಷ ಹಾಗೂ ಒಳಸಂಚು ಪ್ರಕರಣದಲ್ಲಿ ಐದು ವರ್ಷ ಶಿಕ್ಷೆಯನ್ನು ವಿಧಿಸಿದೆ. ಶಾಸಕ ಸತೀಶ್ ಸೈಲ್ ವಿರುದ್ಧ ಬೆಲೆಕೇರಿ ಅದಿರು ಅಕ್ರಮ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣ ದಾಖಲಾಗಿತ್ತು. ಇದರ ವಿರುದ್ಧ ಕಳೆದ 14 ವರ್ಷಗಳಿಂದ ಸುದೀರ್ಘ ವಿಚಾರಣೆ ನಡೆದಿತ್ತು. ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿತ್ತು. ಇದೀಗ ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ.