ಉತ್ಥಾನ ದ್ವಾದಶಿಯಂದು ದೇಶಾದ್ಯಂತ ತುಲಸಿ ವಿವಾಹ : ಏಕರೂಪದ ಭಕ್ತಿಗೆ ಆಚರಣೆ ವಿಭಿನ್ನ
ಉತ್ಥಾನ ದ್ವಾದಶಿಯಂದು ದೇಶಾದ್ಯಂತ ತುಲಸಿ ವಿವಾಹ : ಏಕರೂಪದ ಭಕ್ತಿಗೆ ಆಚರಣೆ ವಿಭಿನ್ನ
ಶುಭ-ಅಶುಭ ಕಾರ್ಯಗಳಲ್ಲಿ ತುಳಸಿಗೆ ವಿಶೇಷ ಸ್ಥಾನ. ತುಳಸಿ ಎಂದರೆ ʻತುಲನ ನಸ್ತಿʼ ಅಂದರೆ ಗುಣದಲ್ಲಿ ತುಲನೆಗೆ ಎಣಕ್ಕದ್ದು ಎನ್ನುವುದು. ದೀಪಾವಳಿ ಹಬ್ಬದ ನಂತರ ದೇಶದಲ್ಲಿ ಆಚರಿಸುವ ಮುಖ್ಯ ಹಬ್ಬವೇ ತುಳಸೀಪೂಜೆ. ಅದಕ್ಕೆ ಬೇರೆ ಬೇರೆ ಪ್ರಾಂತ್ಯದಲ್ಲಿ ಬೇರೆ ಬೇರೆ ಹೆಸರಿನಲ್ಲಿ ಕರೆಯುವುದ ಉಂಟು. ಕಿರು ದೀಪಾವಳಿ, ಉತ್ಥಾನ ದ್ವಾದಶಿ,ತುಳಸಿ ವಿವಾಹ ಇತ್ಯಾದಿ..
ಚಾಂದ್ರಮಾನ ಕಾರ್ತಿಕಮಾಸದ ಶುಕ್ಲಪಕ್ಷದ ದ್ವಾದಶಿಯಂದು ಈ ಹಬ್ಬವನ್ನು ಆಚರಿಸುತ್ತಾರೆ. ಅದಕ್ಕೆ ʻಉತ್ಥಾನ ದ್ವಾದಶಿʼ ಎಂದು ಹೇಳುವುದು. ಈ ಉತ್ಥಾನ ದ್ವಾದಶಿ ಎನ್ನುವದಕ್ಕೊಂಡು ಪುರಾಣ ಕಥೆ ಇದೆ. ಅದೇ ಕಾರಣಕ್ಕೆ ನಮ್ಮಲ್ಲಿ, ತುಳಸಿ ವಿವಾಹ ಮಾಡುವ ಪದ್ದತಿಗೆ ಮಹತ್ವದ ಉದ್ದೇಶವೇನ್ನು ಕಲ್ಪಿಸಲಾಗಿದೆ. ಈ ತುಳಸಿ ಎಂದರೆ ಭಾರತಿಯರ ಪಾಲಿಗೆ ಕೇವಲ ಸಸ್ಯವಲ್ಲ. ಬದಲಾಗಿ ನಮ್ಮ ಜನರಲ್ಲಿ ದೈವಿಕ ಹಾಗೂ ಭಾವನಾತ್ಮಕ ಬಾಂಧ್ಯವಿದೆ. ಗ್ರಹಸ್ತರ ಮನೆ, ಸನ್ಯಾಸಿಗಳ ಮಠ ದೇವರುಗಳ ದೇವಸ್ಥಾನ ಎಂದಾಗ ತುಳಸಿ ಗಿಡ ಇರಬೇಕು. ಈ ತುಳಸಿ ಎನ್ನುವ ದೈವದತ್ತ ಸಸ್ಯವು ಸಮುದ್ರ ಮಂಥನದ ಸಮಯದಲ್ಲಿ ದಕ್ಕಿದ್ದು ಎನ್ನಲಾಗುತ್ತದೆ. ತುಳಸಿಗೆ ಮನೆಯಂಗಳದಲ್ಲಿ ಚೆಂದದ ಬೃಂದಾವನ ಕಟ್ಟಿ , ದೀಪ ಬೆಳಗಿ ಪೂಜೆ ಮಾಡುವ ಪದ್ಧತ್ತಿ ನಮ್ಮವರದು. ಈ ಪರಿಸರಕ್ಕೆ ಅಪಾರವಾದ ಪ್ರಯೋಜನ ಇರುವ ತುಳಸಿಗೆ ದೈವಿ ಭಾವನೆ ದಕ್ಕಿದ್ದರಿಂದ ಇನ್ನೂ ಹೆಚ್ಚನ ಮಹತ್ವ ಎನ್ನಬಹುದಾಗಿದೆ.
ತುಳಸಿಗೆ ಇನ್ನೊಂದು ಹೆಸರು ವೃಂದಾ. ಈಕೆ ಜಲಂಧರನೆಂಬ ರಕ್ಕಸನ ಪತ್ನಿ. ಪತಿವೃತಾ ಶಿರೋಮಣಿಯಾಗಿರುವ ಅವಳಲ್ಲಿರುವ ದೈವ ಶಕ್ತಿಯಿಂದ ಜಲಂಧರನನ್ನು ಕೊಲ್ಲಲು ಯಾರಿಂದಲೂ ಆಗುತ್ತಿರಲ್ಲ. ಆ ದರ್ಪದಿಂದ ಲೋಕಕಂಟಕನಾಗಿ ಮೆರೆಯಲು ಆರಂಭಿಸಿದ್ದ. ಇವನ ಅಟ್ಟಹಾಸಕ್ಕೆ ಕಂಗಾಲಾಗಿದ್ದ ಸುರರೆಲ್ಲಾ ವಿಷ್ಣುವಿನಲ್ಲಿ ರಕ್ಷಣೆ ಕೋರುತ್ತಾರೆ. ಒಮ್ಮೆ ಜಲಂಧರ ದೇವತೆಗಳೊಡನೆ ಯುದ್ಧ ಮಾಡುತ್ತಿರುವಾಗ, ವಿಷ್ಣು ಜಲಂಧರ ರೂಪ ಧರಿಸಿ ವೃಂದಾಳ ಎದುರಿಗೆ ಬರುತ್ತಾನೆ. ಪರಮ ಪತಿವೃತೆ ವೃಂದಾ ಈ ಮಾಯಾರೂಪಿ ನಾರಾಯಣನ್ನು ಸಹಜವಾಗಿಯೇ ತನ್ನ ಪತಿಯೆಂದೇ ಭಾವಿಸಿ ತಬ್ಬಿಕೊಂಡು ಬಿಡುತ್ತಾಳೆ. ಅಲ್ಲಿಗೆ ಅವಳ ಪಾತಿವೃತ್ಯ ಭಂಗವಾಗುತ್ತೆ. ಇತ್ತ ಜಲಂಧರ ಯುದ್ಧದಲ್ಲಿ ಮಡಿಯುತ್ತಾನೆ. ತನ್ನ ಚಾರಿತ್ರ್ಯಕ್ಕೆ ಧಕ್ಕೆ ತರುವ ವಿಷ್ಣುವಿಗೆ ವೃಂದಾ ʻಕಪ್ಪು ಕಲ್ಲಾಗಿ ಹೋಗು ಎನ್ನುತ್ತಾ, ಮುಂದೊಂದು ದಿನ ನಿನಗೂ ಪತ್ನಿಯ ವಿಯೋಗ ಪ್ರಾಪ್ತಿಯಾಗಲಿ ’ ಎಂದು ಶಪಿಸುತ್ತಾಳೆ. ಮುಂದೆ ವೃಂದಾ ತನ್ನ ಪತಿಯ ಚಿತೆಗೆ ಹಾರುವ ಮುನ್ನ ʻʻನೀನು ನನ್ನನ್ನು ಮೋಸಮಾಡಿರುವುದರಿಂದ, ನಿನು ನನ್ನ ಪತಿಯಾಗಿ ಒಪ್ಪಬೇಕು” ಎಂದು ಹೇಳಿ ಸಹಗಮನ ಮಾಡುತ್ತಾಳೆ. ವಿಷ್ಣುವು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ಮುಂದಿನ ಜನ್ಮದಲ್ಲಿ ಸಾಲಿಗ್ರಾಮವಾಗಿ ಪ್ರಭೋದಿನಿ ಏಕಾದಶಿಯ ದಿನ ತುಳಸಿಯನ್ನು ಮದುವೆಯಾಗುತ್ತಾನೆ ಎಂಬ ಕಥೆಯಿದೆ. ಇದರ ಸಂಕೇತವೇ ವಿಷ್ಣು-ತುಳಸಿ ವಿವಾಹ. ಮುಂದೆ ರಾಮನಿಗೆ ಸೀತಾ ವಿಯೋಗಕ್ಕೆ ಕಾರಣ ಈ ವೃಂದಾಳ ಶಾಪವೇ ಎಂದು ಪುರಾಣಕಥೆಗಳು ವ್ಯಾಖ್ಯಾನಿಸುತ್ತವೆ.
ಈ ಶಾಪದಿಂದ ಮಹಾವಿಷ್ಣುವು ಶಾಲಿಗ್ರಾಮ ಎಂಬ ಕಲ್ಲಿನ ರೂಪವನ್ನು ಪಡೆದು ಗಂಡಕಿ ನದಿಗೆ ಸೇರುತ್ತಾನೆ. ವೃಂದಾಳ ಕೊನೆಯ ಮಾತಿನಂತೆ, ಶ್ರೀಕೃಷ್ಣನು ಅವಳಿಗೆ ಅವಳ ಮುಂದಿನ ಜನ್ಮದಲ್ಲಿ ಅವಳ ಹೆಸರು ತುಲಸಿಯಾಗಿ, ಶ್ರೀಕೃಷ್ಣನೊಂದಿಗೆ ಮದುವೆಯಾಯಿತು ಎನ್ನುವುದು ಒಂದು ಕಥೆ.
ಇನ್ನೊಂದು ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಲನೆ ಇಲ್ಲವಾದ್ದರಿಂದ ತುಳಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಳಸಿಯನ್ನು ವಿಷ್ಣುವು ಮದುವೆಯಾದನು ಎನ್ನುವ ಕಥೆಯೂ ಜನಪ್ರೀಯವಾಗಿದೆ.
ಪ್ರತಿ ಹಿಂದುಗಳ ಮನೆಯ ತುಳಸಿ ವಿವಾಹದ ಆಚರಣೆ ನಡೆಯುತ್ತಿರುವುದ ವಾಡಿಕೆಯಾಗಿಬಿಟ್ಟಿದೆ. ಈ ದಿನದ ಪ್ರತೀಕ ಎಂಬಂತೆ ಪ್ರತಿ ಮಹಿಳೆಯೂ ತನ್ನ ಪತಿಯ ಆಯುಷ್ಯ ವೃದ್ಧಿಗೆ, ಬದುಕಿನ ಒಳಿತಿಗೆ ತುಳಸಿಯನ್ನು ಪೂಜಿಸುವ ರೂಢಿಯಿದೆ. ಕಾರ್ತಿಕ ಮಾಸದಲ್ಲಿ ನೆಲ್ಲಿ ಗಿಡದಲ್ಲಿ ವಿಷ್ಣು ಇರುತ್ತಾನೆ ಎಂಬ ನಂಬಿಕೆ. ಆದ್ದರಿಂದ ಉತ್ಥಾನ ದ್ವಾದಶಿಯಂದು ವಿಷ್ಣುವಿನೊಂದಿಗೆ ತುಳಸಿಯ ವಿವಾಹ ಮಹೋತ್ಸವದ ಹಿನ್ನೆಲೆಯಲ್ಲಿ ನೆಲ್ಲಿ ಕಟ್ಟಿಯನ್ನು ತುಳಸಿ ಗಿಡದಲ್ಲಿ ಇಡುವುದು. ತುಳಸಿ ಗಿಡದ ವಿವಾಹವು ಹಿಂದೂ ಪದ್ದತಿಯ ಮದುವೆಯ ಸಂಕೇತ. ಏಲ್ಲರ ಮನೆಗಳಲ್ಲಿ, ದೇವಾಲಯಗಳಲ್ಲಿ ಈ ಆಚರಣೆ ನಡೆಸುವುದು ಸಾಮಾನ್ಯ. ಆ ದಿನ ಪೂಜೆಯಲ್ಲಿ ಪಾಲ್ಗೊಳ್ಳುವವರು ಉಪವಾಸ ಕೈಗೊಳ್ಳುತ್ತಾರೆ. ತುಳಸಿ ಗಿಡದ ಸುತ್ತಲೂ ಮದುವೆ ಮಂಟಪ ನಿರ್ಮಿಸುತ್ತಾರೆ. ತುಲಸಿಯ ಆರಾಧ್ಯನಾದ ಶಾಲಿಗ್ರಾಮ ಜತೆಗೆ ಮದುವೆ ಮಾಡಲಾಗುತ್ತದೆ. ವಿಶೇಷವಾಗಿ ಕಾರ್ತಿಕ ಮಾಸದ ಶುಕ್ಲ ದಶಮಿಯಿಂದ ಪೂರ್ಣಿಮೆಯವರೆಗೆ ಆಚರಿಸಲಾಗುತ್ತದೆ.
ಮಹಾರಾಷ್ಟ್ರದಲ್ಲಿ ತುಲಸಿ ವಿವಾಹದಂದು ಮನೆಯ ಸದಸ್ಯರು ಮಣ್ಣು ಅಥವಾ ತಾಮ್ರದ ತುಲಸಿ ಕಟ್ಟೆ ಮಾಡಿ ಅದರಲ್ಲಿ ತುಲಸಿ ಗಡಿ ನೆಡುತ್ತಾರೆ. ತುಲಸಿಗೆ ದರೋಡೆ, ಕೇಸರಿ ಬಟ್ಟೆ ಮತ್ತು ಹೂವಿನ ಮಾಲೆಗಳು ಕಬ್ಬು ಇತ್ಯಾದಿಗಳಿಂದ ಅಲಂಕಾರ ಮಾಡುತ್ತಾರೆ. ಮದುವೆಯ ಎಲ್ಲಾ ವಿಧ ವಿಧಾನಗಳನ್ನು ಮಾಡಿ ಗಂಗಾಜಲ ಮತ್ತು ಹಾಲಿನಿಂದ ಅಭಿಷೇಕ ಮಾಡಿ, ಹಾಲು, ಸಕ್ಕರೆ ಮತ್ತು ಹಾಲಿನ ಪ್ರಸಾದವನ್ನು ವಿತರಿಸುತ್ತಾರೆ. ಉತ್ತರ ಪ್ರದೇಶದಲ್ಲಿ ವಿಶೇಷವಾಗಿ ಬ್ರಜ್ ಪ್ರದೇಶದಲ್ಲಿ ತುಲಸಿ ವಿವಾಹವನ್ನು ಶ್ರದ್ಧೆಯಿಂದ ಆಚರಿಸುತ್ತಾರೆ. ಇಲ್ಲಿ ತುಲಸಿ ಮತ್ತು ಶಾಲಿಗ್ರಾಮನನ್ನು ಬೇರೆಯಾಗಿರಿಸಿದರೂ, ಮದುವೆಯ ಸಮಯದಲ್ಲಿ ಎರಡನ್ನೂ ಒಂದಾಗಿ ಇರಿಸಲಾಗುತ್ತದೆ.
ಶ್ರೀಕೃಷ್ಣನ ಪ್ರತೀಕವಾದ ಶಾಲಿಗ್ರಾಮಕ್ಕೆ ತುಳಸಿಯೊಂದಿಗೆ ಅಲಂಕಾರ ಮಾಡಿ ಮಂತ್ರೋಚ್ಚಾರಣೆಗಳೊಂದಿಗೆ ವಿವಾಹ ಪೂಜಾ ವಿಧಿಯನ್ನು ನಡೆಸುತ್ತಾರೆ.
ಇನ್ನೂ ಪಶ್ಚಿಮ ಬಂಗಾಳದಲ್ಲಿ, ತುಲಸಿ ವಿವಾಹದ ಹಬ್ಬವನ್ನು ‘ವ್ರಾತ್’ ಅಥವಾ ‘ತ್ವರೋಹನ’ ಎಂದು ಕರೆಯುತ್ತಾರೆ. ತುಲಸಿಯನ್ನು ಸಪ್ತಶೀಲಾ ಎನ್ನುವ ಎಳನೀರು ಮತ್ತು ಹೂವುಗಳಿಂದ ತಯಾರಿಸಿದ ನೀರಿನಿಂದ ಮಡಿ ಮಾಡಿ, ಶೃಂಗಾರ ಮಾಡಿ, ದುರ್ಗಾಮಾತೆಯಂತೆ ಪೂಜಿಸಲಾಗುತ್ತದೆ. ತುಲಸಿಗೆ ಬಟ್ಟೆಯನ್ನು ಉಡಿಸಿ, ಕುಂಕುಮ ಹಚ್ಚಿ ಅಲಂಕಾರ ಮಾಡಿ, ಧೂಪ ದೀಪದ ಆರತಿ ಮಾಡುತ್ತಾರೆ.
ಗುಜರಾತಿನಲ್ಲಿ ತುಲಸಿಯನ್ನು ಲಲಿತಾ ಅಥವಾ ತುಲಸೀದೇವಿ ಎಂದು ಕರೆಯತ್ತಾರೆ. ಇಲ್ಲಿ ತುಲಸಿಗೆ ಬಣ್ಣಬಣ್ಣದ ಬಟ್ಟೆಗಳು ಮತ್ತು ಆಭೂಷಣ ತೊಡಿಸುತ್ತಾರೆ. ಶಾಲಿಗ್ರಾಮವನ್ನು ಅಥವಾ ಅದರ ಪ್ರತಿ ಚಿತ್ರವನ್ನು ತುಲಸಿಯ ಸಮೀಪ ಇಟ್ಟು ಮದುವೆಯ ಶಾಸ್ತ್ರ ಮಾಡುತ್ತಾರೆ. ಒಡಿಶಾದಲ್ಲಿ ತುಲಸಿ ವಿವಾಹವನ್ನು ‘ಕಥನ್ ಯಾತ್ರ’ ಎಂದು ಕರೆಯುತ್ತಾರೆ. ಈ ಹಬ್ಬವು ಕಾರ್ತಿಕ ಮಾಸದ ಕೊನೆಯ ದಿನವಾದ ಕಾರ್ತಿಕ ಪೂರ್ಣಿಮೆಯಂದು ನಡೆಸುತ್ತಾರೆ. ತುಲಸಿ ಮತ್ತು ಶಾಲಿಗ್ರಾಮದ ಮದುವೆಯನ್ನು ನಾನಾ ರೀತಿಯ್ಲಲಿ ಬಣ್ಣಿಸುತ್ತಾ ಮಾಡುತ್ತಾರೆ. ಅದಕ್ಕಾಗಿ ಕೀರ್ತನೆಗಳು ನಡೆಯುವುದು ಕಂಡು ಬರುತ್ತದೆ. ಕರ್ನಾಟಕದಲ್ಲಿ ತುಲಸಿ ಸಸಿಯನ್ನು ತುಲಸಿ ಕಟೆಯಲ್ಲಿಯೇ ಭಕ್ತಿಯಿಂದ ಬೆಳೆಸಿ ಅದನ್ನು ವಿಶೇಷ ಹೂವುಗಳಿಂದ ಅಲಂಕಾರ ಮಾಡಿ, ನೆಲ್ಲಿ ಕಡ್ಡಿಯನ್ನು ಇಟ್ಟು, ಕಬ್ಬಗಳನ್ನು ಕಟ್ಟಿ ಮಂಟಪಮಾಡಿ ಶಂಖ, ಜಾಗಟೆಗಳ ನಾದ ಮಾಡುತ್ತ ಮಂತ್ರೋಚ್ಚಾರಣೆಯೊಂದಿಗೆ ವಿವಾಹ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರು ಮಂಗಳಗೀತೆಗಳನ್ನು ಹಾಡುತ್ತ ರಂಗೋಲಿ ಹಾಕಿ ಮನೆ ಮುಂದೆ ತುಲಸಿಯನ್ನು ಪೂಜಿಸುತ್ತಾರೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ತುಲಸಿ ಮತ್ತು ಶಾಲಿಗ್ರಾಮನನ್ನು ಮಣ್ಣಿನ ಅಣಕದಲ್ಲಿ ಪೇರಿಸಿ ಇಡಲಾಗುವುದು. ತುಲಸಿ ಸಸಿ ಸುತ್ತ ಲತಾ ದೀಪಗಳನ್ನು ಹಚ್ಚಿ ಪರಂಪರಾಗತವಾಗಿ ಸಾಮೂಹಿಕ ಪೂಜೆ, ಪ್ರಾರ್ಥನೆ ಮಾಡುತ್ತಾರೆ. ಹಬ್ಬದ ಸಂದರ್ಭದಲ್ಲಿ ಪಾರಂಪರಿಕ ಆಡುಂಬಟ್ಟೆ ತೊಟ್ಟು, ತುಲಸಿಯ ಸುತ್ತ, ಮತ್ತು ಸಪ್ತಪದಿ ವಿಧಾನಗಳನ್ನು ಪೂರ್ಣಗೊಳಿಸುತ್ತಾರೆ . ರಾಜಸ್ಥಾನದಲ್ಲಿ ತುಲಸಿ ವಿವಾಹದ ಸಂಭ್ರಮವನ್ನುಹಬ್ಬದ ಕಂಬಳದ ದಿನದಂತೆ ಆಚರಿಸುತ್ತಾರೆ. ತುಳಸಿ ವಿವಾಹ ದಿನ, ತುಲಸಿ ಸಸಿ ಸುತ್ತಮುತ್ತ ಹೂವಿನ ಅಲಂಕಾರ, ಬಣ್ಣ ಬಣ್ಣದ ದೀಪಗಳು ಹಾಗೂ ರಂಗೋಲಿಗಳನ್ನು ಹಾಕಿ ಅಲಂಕಾರ ಮಾಡುತ್ತಾರೆ. ವಿಶೇಷವಾಗಿ ರಾಜಸ್ಥಾನಿ ಸಂಪ್ರದಾಯಿಕ ವೇಷಭೂಷಣದ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಾರೆ.
ವಾಸ್ತವದಲ್ಲಿ ತುಲಸಿ ವಿವಾಹವು ದೇಶದಾದ್ಯಂತ ವಿಭಿನ್ನ ಪ್ರಾಂತ್ಯಗಳಲ್ಲಿ ತನ್ನದೇ ಆದ ವಿಶಿಷ್ಟ ಪದ್ಧತಿಗಳಿಂದ ನಡೆದರೂ, ಎಲ್ಲ ಕಡೆಗಳಲ್ಲಿ ಕಂಡು ಬರುವ ಶ್ರದ್ಧಾ ಭಕ್ತಿಗೆ ಎಲ್ಲಿಯೂ ಕಿಂಚಿತ್ ಲೊಪ ಇರುವುದಿಲ್ಲ. ಎಲ್ಲಕಡೆಗಳಲ್ಲಿ ಕಂಡು ಬರುವುದು ತುಳಸಿವನವನ್ನು ಬೆಳೆಸುವವನು ಎಲ್ಲ ಪಾಪದಿಂದ ಮುಕ್ತನಾಗುತ್ತಾನೆ ಎಂಬುವುದು. ಜೊತೆಗೆ ಮನೆಯ ಸುತ್ತ ತುಳಸಿ ಗಿಡವನ್ನು ಬೆಳೆಸುವುದರಿಂದ ಮನುಕುಲಕ್ಕೆ ಅಪಾರವಾದ ಲಾಭವಿದೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.