ಅಂಕೋಲಾ: ಗಂಡ ಹೆಂಡತಿ ನಡುವಿನ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಪತ್ನಿ ಗಂಡನೊಂದಿಗಿನ ಸಿಟ್ಟಿಗೆ ಪತಿಯ ಮೇಲೇ ಬಿಸಿ ನೀರು ಸುರಿದ ಆತಂಕಕಾರಿ ಘಟನೆ ಅಂಕೋಲಾದಲ್ಲಿ ನಡೆದಿದೆ. ವಿಷ್ಣು ಬುದ್ದು ಗೌಡ ಪತ್ನಿಯ ಸಿಟ್ಟಿಗೆ ಬಿಸಿನೀರಿನಲ್ಲಿ ಬೆಂದ ಪತಿಯಾಗಿದ್ದಾನೆ.
ತಾಲ್ಲೂಕಿನ ಬಾಳೆಗುಳಿ ನಿವಾಸಿ ವಿಷ್ಣು ಗೌಡ ಪತ್ನಿಯೊಂದಿಗೆ ವಾಸವಿದ್ದು, ಶುಕ್ರವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಯಾವುದೋ ಕಾರಣಕ್ಕೆ ಗಂಡ ಹೆಂಡತಿ ನಡುವೆ ಕಲಹ ಉಂಟಾಗಿದೆ. ಈ ಜಗಳ ತಾರಕಕ್ಕೇರಿದ್ದು ಸಿಟ್ಟಿಗೆದ್ದ ಪತ್ನಿ ಒಲೆಯ ಮೇಲೆ ಕುದಿಯುತ್ತಿದ್ದ ಬಿಸಿ ನೀರಿನ ಪಾತ್ರೆಯನ್ನು ತಂದು ಗಂಡನ ಮೇಲೇ ಬಿಸಿನೀರು ಸುರಿದಿದ್ದಾರೆ.
ಏಕಾಏಕಿ ಬಿಸಿನೀರು ಸುರಿದ ಪರಿಣಾಮ ವಿಷ್ಣು ಗೌಡ ಮುಖ, ಕುತ್ತಿಗೆ, ಬೆನ್ನು ಹಾಗೂ ಎದೆಯ ಭಾಗ ಸಹ ಸುಟ್ಟುಹೋಗಿದೆ. ಬಿಸಿನೀರು ಸುರಿದ ಪತ್ನಿ ತಿರುಗಿಯೂ ನೋಡದೇ ತವರುಮನೆ ಹಾದಿ ಹಿಡಿದಿದ್ದು, ಅಕ್ಕಪಕ್ಕದವರು ವಿಷ್ಣು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಈ ಸಂಬಂಧ ಅಂಕೋಲಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.