ಕಾಡುಕೋಣ ತಪ್ಪಿಸಲು ಹೋಗಿ ಮರಕ್ಕೆ ಬೈಕ್ ಡಿಕ್ಕಿ: ಸವಾರ ಸಾವು
ಕಾಡುಕೋಣ ತಪ್ಪಿಸಲು ಹೋಗಿ ಮರಕ್ಕೆ ಬೈಕ್ ಡಿಕ್ಕಿ: ಸವಾರ ಸಾವು

ಜೋಯಿಡಾ: ಜೋಯಿಡಾ – ಕಾರವಾರ ಹೆದ್ದಾರಿಯ ಕುಂಬಾರವಾಡದ ಉಳವಿ ಕ್ರಾಸ್ ಹತ್ತಿರ ದ್ವಿಚಕ್ರ ವಾಹನ ಒಂದು ಸವಾರನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಕಾರವಾರದ 29 ವರ್ಷ ವಯಸ್ಸಿನ ಸಿದ್ದಾರ್ಥ್ ದೇವಕರ ಎಂಬಾತನೆ ಸ್ಥಳದಲ್ಲೇ ಸಾವನ್ನಪ್ಪಿರುವ ಯುವಕನಾಗಿದ್ದಾನೆ. ಉಳಿದಂತೆ ಕುಂಬಾರವಾಡದ 20 ವರ್ಷ ವಯಸ್ಸಿನ ಆದರ್ಶ್ ರಾಮದಾಸ ಗಾವಡಾ ಮತ್ತು ಕಾರವಾರದ ಬೈರಾ ನಿವಾಸಿ 20 ವರ್ಷ ವಯಸ್ಸಿನ ಸಂಜಯ್ ನಾಯ್ಕ ಇವರಿಬ್ಬರಿಗೂ ಗಂಭೀರ ಗಾಯವಾಗಿದೆ.
ಘಟನೆ ನಡೆದ ತಕ್ಷಣವೇ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಜೋಯಿಡಾ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಮಂಗೇಶ್ ಕಾಮತ್ ಅವರು ಜೋಯಿಡಾ ಪೊಲೀಸರಿಗೆ ಮಾಹಿತಿಯನ್ನು ನೀಡಿ, ಸ್ಥಳೀಯರ ಸಹಕಾರದಲ್ಲಿ ಗಾಯಾಳುಗಳನ್ನು ತಮ್ಮ ಸ್ವಂತ ವಾಹನದಲ್ಲಿ ಕರೆದೊಯ್ದು ಜೋಯಿಡಾ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.
ರಸ್ತೆ ಮಧ್ಯೆ ಏಕಾಏಕಿ ಕಾಡುಕೋಣ ಬಂದಿರುವುದರಿಂದ ಅದನ್ನು ತಪ್ಪಿಸಲು ಹೋಗಿ ಬೈಕ್ ಮರಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ.